ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವ ಶೇ. 50ರಷ್ಟು ಅಭ್ಯರ್ಥಿಗಳು ಸರಕಾರಿ ಅಧಿಕಾರಿಗಳ ಮಕ್ಕಳು

Update: 2020-08-11 09:47 GMT

ಹೊಸದಿಲ್ಲಿ : ಪ್ರತಿ ವರ್ಷ ಯುಪಿಎಸ್‍ಸಿ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಾಗ ಗ್ರಾಮೀಣ, ಬಡ, ರೈತ ಕುಟುಂಬ ಹಿನ್ನೆಲೆಯವರು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ ಬಗ್ಗೆ ಅನೇಕ ವರದಿಗಳು ಬರುತ್ತವೆ. ಆದರೆ ದೇಶದ ಪ್ರತಿಷ್ಠಿತ ಸಿವಿಲ್ ಸರ್ವಿಸ್ ತರಬೇತಿ ಅಕಾಡಮಿಯಾಗಿರುವ ಲಾಲ್ ಬಹದ್ದೂರ್ ನ್ಯಾಷನಲ್ ಅಕಾಡಮಿ ಆಫ್ ಅಡ್ಮಿನಿಸ್ಟ್ರೇಶನ್  ಇಲ್ಲಿನ ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕನಿಷ್ಠ ಅರ್ಧದಷ್ಟು ಮಂದಿ ಸರಕಾರಿ ಅಧಿಕಾರಿಗಳ ಮಕ್ಕಳಾಗಿದ್ದಾರೆ ಎಂದು theprint.in ವರದಿ ತಿಳಿಸಿದೆ.

ಈ ಅಕಾಡಮಿಯಲ್ಲಿ 2014ರಿಂದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಫೌಂಡೇಶನ್ ಕೋರ್ಸಿನಲ್ಲಿ ಭಾಗವಹಿಸಿದವರ ಪೈಕಿ ಕನಿಷ್ಠ ಶೇ. 50ರಷ್ಟು ಮಂದಿ  ಸರಕಾರಿ ಅಧಿಕಾರಿಗಳ ಕುಟುಂಬದಿಂದ ಬಂದವರಾಗಿದ್ದಾರೆಂದು ಅಂಕಿಅಂಶಗಳು ಹೇಳುತ್ತವೆ.  ಕಳೆದ ವರ್ಷ ಈ ಅಕಾಡಮಿಯಲ್ಲಿ ಫೌಂಡೇಶನ್ ಕೋರ್ಸ್‍ ನಲ್ಲಿ ಭಾಗವಹಿಸಿದ್ದ 326 ಆಫೀಸರ್ ಟ್ರೈನಿಗಳ ಪೈಕಿ 166 ಮಂದಿಯ, ಅಂದರೆ ಶೇ 50.9ರಷ್ಟು ಮಂದಿಯ ತಂದೆಯರು ಸರಕಾರಿ ಸೇವೆಯಲ್ಲಿರುವವರು. ಈ ಸಂಸ್ಥೆ ಸಂಗ್ರಹಿಸುವ ಅಂಕಿಅಂಶಗಳಲ್ಲಿ ಅಲ್ಲಿ ತರಬೇತಿ ಪಡೆದವರ ತಂದೆಯರ ವೃತ್ತಿಯನ್ನು ಮಾತ್ರ ಉಲ್ಲೇಖಿಸಿದೆ ಆದರೆ ತಾಯಂದಿರ ವೃತ್ತಿಗಳನ್ನು ಉಲ್ಲೇಖಿಸಿಲ್ಲ.

ಈ ಸಂಸ್ಥೆ ಬಳಿ 2018ರ ಅಂಕಿಅಂಶಗಳು ಲಭ್ಯವಿಲ್ಲ. ಆದರೆ 2017ರಲ್ಲಿ ಕೋರ್ಸ್‍ ನಲ್ಲಿ ಭಾಗವಹಿಸಿದ್ದ 369 ಆಫೀಸರ್ಸ್ ಟ್ರೈನೀಗಳ ಪೈಕಿ 212 ಅಥವಾ ಶೇ 57.4ರಷ್ಟು ಮಂದಿಯ ಅಪ್ಪಂದಿರು ಸರಕಾರಿ ಸೇವೆಗಳಲ್ಲಿದ್ದವರಾಗಿದ್ದರೆ, 2016ರಲ್ಲಿ 377 ಮಂದಿಯ ಪೈಕಿ 208 ಅಥವಾ ಶೇ 55.1ರಷ್ಟು ಮಂದಿಯ, 2015ರಲ್ಲಿ ಒಟ್ಟು 350 ಮಂದಿಯ ಪೈಕಿ 200 ಅಥವಾ ಶೇ 57.14ರಷ್ಟು ಮಂದಿಯ ಹಾಗೂ 2014ರಲ್ಲಿ ಒಟ್ಟು  285 ಮಂದಿಯ ಪೈಕಿ 171 ಅಥವಾ ಶೇ 60ರಷ್ಟು ಮಂದಿಯ ಅಪ್ಪಂದಿರು ಸರಕಾರಿ ಸೇವೆಯಲ್ಲಿದ್ದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News