‘ಒಮ್ಮೆ ಪುತ್ರಿಯಾದವಳು ಯಾವತ್ತೂ ಪುತ್ರಿಯೇ, ಪುತ್ರಿಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು’

Update: 2020-08-11 12:36 GMT

ಹೊಸದಿಲ್ಲಿ: ಹೆತ್ತವರ ಆಸ್ತಿಯಲ್ಲಿ ಪುತ್ರಿಯೊಬ್ಬಳು ಸಮಾನ ಹಕ್ಕಿಗೆ ಅರ್ಹಳು ಎಂದು ಮಂಗಳವಾರ ತನ್ನ ತೀರ್ಪಿನಲ್ಲಿ ಹೇಳಿರುವ  ಸುಪ್ರೀಂ ಕೋರ್ಟ್, ಹಿಂದು ಉತ್ತರಾಧಿಕಾರ ಕಾಯಿದೆಗೆ 2005ರಲ್ಲಿ ತರಲಾದ ತಿದ್ದುಪಡಿ ಅದರ ಹಿಂದಿನ ವರ್ಷಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದೆ.

“ಒಮ್ಮೆ ಪುತ್ರಿಯಾದವಳು ಯಾವತ್ತೂ ಪುತ್ರಿಯೇ... ಪುತ್ರ ಮದುವೆಯಾಗುವ ತನಕ  ಮಾತ್ರ ಪುತ್ರನಾಗಿರುತ್ತಾನೆ'' ಎಂದು ತೀರ್ಪು ನೀಡುವ ವೇಳೆ ಜಸ್ಟಿಸ್ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಹಾಗೂ ಜಸ್ಟಿಸ್ ಎಸ್ ಅಬ್ದುಲ್ ನಝೀರ್ ಹಾಗೂ ಎಂ ಆರ್ ಶಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿದೆ.

“ತಂದೆ ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಅವಿಭಜಿತ ಹಿಂದು ಕುಟುಂಬದ ಆಸ್ತಿಯಲ್ಲಿ ಆಕೆಗೆ ಇತರರಂತೆಯೇ ಸಮಾನ ಹಕ್ಕು ಇದೆ. ಪುತ್ರಿಯರಿಗೆ ಪುತ್ರರಂತೆಯೇ ಸಮಾನ ಹಕ್ಕುಗಳನ್ನು ನೀಡಬೇಕು. ಪುತ್ರಿಯೊಬ್ಬಳು ಜೀವನಪರ್ಯಂತ ಪ್ರೀತಿಯ ಪುತ್ರಿಯಾಗಿಯೇ ಇರುತ್ತಾಳೆ'' ಎಂದೂ ಪೀಠ ಹೇಳಿದೆ.

ತಿದ್ದುಪಡಿಗೊಂಡ ಹಿಂದು ಉತ್ತರಾಧಿಕಾರ ಕಾಯಿದೆಯ ಅಧಿಸೂಚನೆ ಹೊರಡಿಸಿದ ದಿನಾಂಕವಾದ ಸೆಪ್ಟೆಂಬರ್ 9, 2005ರಂದು ತಂದೆ ಮತ್ತು ಪುತ್ರಿ ಇಬ್ಬರೂ ಜೀವಂತವಿದ್ದರೆ ಮಾತ್ರ ಪುತ್ರಿಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರಲಿದೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಇಂದಿನ ತೀರ್ಪು ಮಹತ್ವ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News