ಶೋಪಿಯಾನ್‌ ನಲ್ಲಿ ಕೊಲ್ಲಲ್ಪಟ್ಟ ಮೂವರು ಉಗ್ರರಲ್ಲ, ಸಾಮಾನ್ಯ ಕಾರ್ಮಿಕರು: ಕುಟುಂಬಗಳ ಆರೋಪ

Update: 2020-08-11 13:10 GMT
ಫೋಟೊ ಕೃಪೆ: twitter.com

ಶ್ರೀನಗರ, ಆ.11: ಜು.18ರಂದು ಗುಂಡಿನ ಕಾಳಗದಲ್ಲಿ ಕೊಲ್ಲಲ್ಪಟ್ಟ ಮೂವರು ಅಪರಿಚಿತ ‘ಉಗ್ರರು’ ಎಂದು ಸೇನೆ ಹೇಳಿದ್ದರೆ, ಅವರು ಉಗ್ರರಲ್ಲ ಸಾಮಾನ್ಯ ಕಾರ್ಮಿಕರಾಗಿದ್ದರು. ತಮ್ಮ ಅಮಾಯಕ ಬಂಧುಗಳಾಗಿದ್ದಾರೆ ಎಂದು ಶೋಪಿಯಾನ್ ನಲ್ಲಿ ಕೊಲ್ಲಲ್ಪಟ್ಟ ಮೂವರ ಕುಟುಂಬಸ್ಥರು ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಗುರುವಾರ ಈ ಕುಟುಂಬಗಳು ತಮ್ಮವರ ನಾಪತ್ತೆ ಬಗ್ಗೆ ರಾಜೌರಿ ಪೊಲೀಸರಲ್ಲಿ ದೂರು ದಾಖಲಿಸಿದ್ದವು.

“ಇಮ್ತಿಯಾಝ್ ಅಹ್ಮದ್ ಕಳೆದೊಂದು ತಿಂಗಳಿನಿಂದ ಶೋಪಿಯಾನ್ ‌ನಲ್ಲಿ ಕೆಲಸ ಮಾಡುತ್ತಿದ್ದ. ಕೆಲಸಕ್ಕಾಗಿ ಹುಡುಕಾಡುತ್ತಿದ್ದ ನನ್ನ ಮಗ ಅಬ್ರಾರ್ ಅಹ್ಮದ್(25) ಮತ್ತು ಇದೇ ಹೆಸರಿನ ನನ್ನ ಅತ್ತಿಗೆಯ ಮಗನನ್ನು ತಾನಿರುವಲ್ಲಿಗೆ ಬರುವಂತೆ ಆತ ತಿಳಿಸಿದ್ದ. ಜು.16ರಂದು ಇವರಿಬ್ಬರೂ ಶೋಪಿಯಾನ್‌ ಗೆ ತೆರಳಿದ್ದರು. ಆಗಿನಿಂದ ಅವರ ಇರುವಿಕೆಯ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ, ಜುಲೈ 18ರಂದು ಅಬ್ರಾರ್ ಅಹ್ಮದ್‌ನ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು” ಎಂದು ಅಬ್ರಾರ್ ಅಹ್ಮದ್‌ ತಂದೆ ಮುಹಮ್ಮದ್ ಯೂಸುಫ್ ತಿಳಿಸಿದರು ಎಂದು thewire.in ವರದಿ ಮಾಡಿದೆ.

ಜು.18ರಂದು ಶೋಪಿಯಾನ್‌ ನ ಅಮ್ಶಿಪೋರಾದಲ್ಲಿ ಕೊಲ್ಲಲ್ಪಟ್ಟವರೆನ್ನಲಾದವರ ಚಿತ್ರಗಳನ್ನು ಯಾರೋ ತನಗೆ ತೋರಿಸಿದ್ದು, ಅವುಗಳಿಂದ ತನ್ನ ಅತ್ತಿಗೆಯ ಮಗ ಅಬ್ರಾರ್‌ನನ್ನು ಗುರುತಿಸಿದ್ದೇನೆ ಎಂದ ಯೂಸುಫ್, “ಈ ಮೂವರು ಯುವಕರು ದುಡಿಯಲು ಶೋಪಿಯಾನ್‌ ಗೆ ತೆರಳಿದ್ದರು ಮತ್ತು ಅವರಿಗೆ ಉಗ್ರವಾದದೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ನಾವು ಬಡವರು, ಉಗ್ರವಾದದೊಂದಿಗೆ ನಮಗೆ ದೂರದ ನಂಟು ಸಹ ಇಲ್ಲ” ಎಂದರು.

“ಇಬ್ಬರೂ ಅಬ್ರಾರ್‌ ಗಳು ಶೋಪಿಯಾನ್ ತಲುಪಿದ್ದಾರೆ ಎಂದು ಇಮ್ತಿಯಾಝ್ ಅಹ್ಮದ್ ನನಗೆ ಜು.17ರಂದು ಸಂಜೆ ದೂರವಾಣಿ ಮೂಲಕ ತಿಳಿಸಿದ್ದ. ಕೋವಿಡ್-19ರ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್‌ ಗೆ ಒಳಪಡಿಸಲಾಗಿದೆ ಎಂದು ನಾವು ಮೊದಲು ಭಾವಿಸಿದ್ದೆವು. ಅವರೆಲ್ಲಿದ್ದಾರೆ ಎನ್ನುವುದು ನಮಗೆ ಗೊತ್ತಿರಲಿಲ್ಲ. ಇದೀಗ ನಾವು ಪೊಲೀಸರಲ್ಲಿ ನಾಪತ್ತೆ ದೂರು ದಾಖಲಿಸಿದ್ದೇವೆ” ಎಂದು ರಾಜೌರಿಯ ಸ್ಥಳಿಯ ನಿವಾಸಿ ಲಾಲ್ ಹುಸೈನ್ ತಿಳಿಸಿದರು ಎಂದು ವರದಿ ತಿಳಿಸಿದೆ.

ಈ ಯುವಕರು ಶೋಪಿಯಾನ್ ಎನ್‌ ಕೌಂಟರ್‌ ನಲ್ಲಿ ಕೊಲ್ಲಲ್ಪಟ್ಟಿರಬಹುದು ಎಂದು ಅವರ ಕುಟುಂಬಸ್ಥರು ಭಯಗೊಂಡಿದ್ದಾರೆ. ಈ ಬಗ್ಗೆ ಶೀಘ್ರ ತನಿಖೆ ನಡೆಯಬೇಕು ಎಂದು ರಾಜೌರಿಯ ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತ ಗಫ್ತಾರ್ ಅಹ್ಮದ್ ಚೌಧರಿ ಹೇಳಿದರು.

ಜು.18ರ ಎನ್‌ ಕೌಂಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳನ್ನು ಗಮನಿಸಲಾಗಿದೆ. ಅಂದು ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರನ್ನು ಗುರುತಿಸಲಾಗಿಲ್ಲ ಮತ್ತು ಅವರ ಶವಗಳನ್ನು ದಫನ ಮಾಡಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೇನೆಯು ಸೋಮವಾರ ಸಂಜೆ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ರೈಫಲ್ಸ್ ನೀಡಿದ್ದ ಮಾಹಿತಿಯ ಮೇರೆಗೆ ಜು.18ರಂದು ಎನ್‌ಕೌಂಟರ್ ನಡೆದಿತ್ತು. ಹತ ಮೂವರು ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು, ಗುಂಡುಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರೋರ್ವರು ತಿಳಿಸಿದರು.

ರಾಜೌರಿಯ ಮೂವರು ಯುವಕರು ನಾಪತ್ತೆಯಾಗಿರುವ ಬಗ್ಗೆ ಕುಟುಂಬಗಳು ದೂರು ದಾಖಲಿಸಿವೆ ಎಂದು ರಾಜೌರಿ ಎಸ್‌ಪಿ ಚಂದನ ಕೊಹ್ಲಿ ದೃಢಪಡಿಸಿದ್ದಾರೆ.

ತನ್ಮಧ್ಯೆ ಮೂವರು ಕಾರ್ಮಿಕರ ನಾಪತ್ತೆಯು ಗಂಭಿರ ವಿಷಯವಾಗಿದೆ ಎಂದಿರುವ ಸಿಪಿಎಂ, ಕಾಲಮಿತಿಯ ನ್ಯಾಯಾಂಗ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News