ದ.ಕ. ಜಿಲ್ಲೆ : ಕೋವಿಡ್‌ಗೆ ಒಂಬತ್ತು ಬಲಿ; ಹೊಸದಾಗಿ 243 ಮಂದಿಗೆ ಕೊರೋನ ಸೋಂಕು

Update: 2020-08-11 14:55 GMT

ಮಂಗಳೂರು, ಆ.11: ದ.ಕ. ಜಿಲ್ಲೆಯಲ್ಲಿ ಕರೋನ ಸೋಂಕಿಗೆ ಒಂಬತ್ತು ಮಂದಿ ಬಲಿಯಾಗಿದ್ದಾರೆ. ಮಂಗಳವಾರ 243 ಮಂದಿಗೆ ಸೋಂಕು ತಗುಲಿದ್ದು, 519 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ವಿವಿಧ ಕಾಯಿಲೆಗಳೊಂದಿಗೆ ಬಳಲುತ್ತಿದ್ದ ಒಂಬತ್ತು ಕೊರೋನ ಸೋಂಕಿತರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತರ ಪೈಕಿ ಎಂಟು ಮಂದಿ ಮಂಗಳೂರಿನವರಾದರೆ, ಇನ್ನೋರ್ವ ಹೊರಜಿಲ್ಲೆಯವರು. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 237ಕ್ಕೆ ಏರಿದೆ.

243 ಮಂದಿಗೆ ಕೊರೋನ ಸೋಂಕು: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲಾಡಳಿತದ ನಿಯಂತ್ರಕ್ಕೂ ಬಾರದಾಗಿದೆ. ಮಂಗಳವಾರ ಹೊಸದಾಗಿ 243 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳವಾರ ಬಿಡುಗಡೆಯಾದ ಬುಲೆಟಿನ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಮಂಗಳೂರು ತಾಲೂಕು ಅಗ್ರಸ್ಥಾನದಲ್ಲಿದೆ. ಮಂಗಳೂರು-189, ಬಂಟ್ವಾಳ-30, ಪುತ್ತೂರು-6, ಸುಳ್ಯ-4, ಬೆಳ್ತಂಗಡಿ-10, ಹೊರಜಿಲ್ಲೆಯ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರ ಪೈಕಿ 123 ಸಾಮಾನ್ಯ ಶೀತಜ್ವರ ಪ್ರಕರಣ, ಒಂಬತ್ತು ಉಸಿರಾಟ ಸಮಸ್ಯೆಯ ಪ್ರಕರಣ ಪತ್ತೆಯಾಗಿದ್ದು, 23 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 88 ಮಂದಿಯ ಸೋಂಕಿನ ಮೂಲವನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ. ದ.ಕ.ಜಿಲ್ಲೆಯಲ್ಲಿ ಇದುವರೆಗೆ 7,596 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

519 ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಜಿಲ್ಲೆಯಲ್ಲಿನ 519 ಕೊರೋನ ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ ಮೂರು-ನಾಲ್ಕು ದಿನಗಳಿಂದ ಗುಣಮುಖರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ. ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿನ 62, ಆರೈಕೆ ಕೇಂದ್ರದಲ್ಲಿದ್ದ 63, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 394 ಮಂದಿ ಕೊರೋನ ಮುಕ್ತರಾಗಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 4,734 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 2,625 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News