ಜ್ಯೋತಿಷಿಗಳಿಗೆ ಅವಮಾನಿಸಿದ ಆರೋಪ: ವಿಹಿಂಪ ಕಚೇರಿಗೆ ತೆರಳಿ ಕ್ಷಮೆಯಾಚಿಸಿದ ಕಲಾವಿದ ಅರವಿಂದ ಬೋಳಾರ್

Update: 2020-08-11 16:00 GMT

ಮಂಗಳೂರು, ಆ.11: ‘ಪುರೋಹಿತರು-ಜ್ಯೋತಿಷಿಗಳಿಗೆ ಅವಮಾನ ಮಾಡಿದ್ದಾರೆ’ ಎನ್ನುವ ಆರೋಪದಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಕಲಾವಿದ ಅರವಿಂದ ಬೋಳಾರ್ ವಿಶ್ವ ಹಿಂದೂ ಪರಿಷತ್ ಕಚೇರಿಗೆ ತೆರಳಿ ಕ್ಷಮೆಯಾಚಿಸಿದ್ದಾರೆ.

‘ದೈಜಿವರ್ಲ್ಡ್’ ಯೂಟ್ಯೂಬ್ ಚಾನೆಲ್‌ ನಲ್ಲಿ ಆ.9ರಂದು ನಿರೂಪಕ ವಾಲ್ಟರ್ ನಂದಳಿಕೆ ಮತ್ತು ಕಲಾವಿದ ಅರವಿಂದ ಬೋಳಾರ್ ಅವರು ಚಾನೆಲ್‌ ನ ಕಾರ್ಯಕ್ರಮವೊಂದರಲ್ಲಿ ಪುರೋಹಿತರು-ಜ್ಯೋತಿಷಿಗಳನ್ನು ಅವಮಾನಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕುಂಜತ್‌ ಬೈಲ್ ನಿವಾಸಿ ಶಿವರಾಜ್ ಎಂಬವರು ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮರುದಿನವೇ ಕಲಾವಿದ ಅರವಿಂದ ಬೋಳಾರ್ ಅವರು ವಿಎಚ್‌ಪಿ ಕಚೇರಿಗೆ ಸಂಜೆ 5 ಗಂಟೆಗೆ ತೆರಳಿ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ‘ವಾರ್ತಾಭಾರತಿ’ ಜೊತೆಗೆ ಮಾತನಾಡಿದ ವಿಎಚ್‌ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾವಿದ ಅರವಿಂದ ಬೋಳಾರ್ ಪರಿಷತ್‌ ನ ‘ವಿಶ್ವಶ್ರೀ’ ಕಚೇರಿಗೆ ಆಗಮಿಸಿ, ಕ್ಷಮೆ ಕೋರಿದ್ದಾರೆ. ತನ್ನಿಂದ ಮಾತಿನಲ್ಲಿ ಪ್ರಮಾದವಾಗಿದೆ. ಮುಂದೆ ಈ ರೀತಿಯ ಯಾವುದೇ ದೃಶ್ಯಗಳನ್ನು ನಾನು ಮಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ ಸದಾಶಿವ, ವಿಎಚ್‌ಪಿ ಜಿಲ್ಲಾ ಅಧ್ಯಕ್ಷ ಗೋಪಾಲ ಕುತ್ತಾರು, ಬಜರಂಗದಳದ ಭುಜಂಗ ಕುಲಾಲ್, ವಿಎಚ್‌ಪಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News