ರಾಜಸ್ಥಾನ ಬಿಕ್ಕಟ್ಟು ಅಂತ್ಯ: ಪಕ್ಷದಲ್ಲಿ ಶಾಂತಿ, ಭ್ರಾತೃತ್ವ ಕುರಿತು ಮಾತನಾಡಿದ ಗೆಹ್ಲೋಟ್

Update: 2020-08-11 16:26 GMT

ಹೊಸದಿಲ್ಲಿ,ಆ.11: ಪಕ್ಷದಲ್ಲಿ ಶಾಂತಿ ಮತ್ತು ಭ್ರಾತೃತ್ವ ಉಳಿಯಲಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಂಗಳವಾರ ಒತ್ತಿ ಹೇಳಿದರು.

ಗೆಹ್ಲೋಟ್ ವಿರುದ್ಧ ಬಂಡಾಯವೆದ್ದಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಸೋಮವಾರ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕ ಬಂಡಾಯವನ್ನು ಹಿಂದೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಪೈಲಟ್ ಎತ್ತಿದ್ದ ವಿಷಯಗಳನ್ನು ಪರಿಶೀಲಿಸುವುದಾಗಿ ಹೈಕಮಾಂಡ್ ಅವರಿಗೆ ಭರವಸೆಯನ್ನು ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗೆಹ್ಲೋಟ್,‘ನನ್ನ ಬಗ್ಗೆ ಯಾವುದೇ ಶಾಸಕರಿಗೆ ಅಸಮಾಧಾನವಿದ್ದರೆ ಅದನ್ನು ಬಗೆಹರಿಸುವುದು ನನ್ನ ಕರ್ತವ್ಯವಾಗಿದೆ. ಹಿಂದೆಯೂ ಇದನ್ನು ನಾನು ಮಾಡಿದ್ದೇನೆ ಮತ್ತು ಈಗಲೂ ಮಾಡುತ್ತೇನೆ ’ ಎಂದರು.

ಗೆಹ್ಲೋಟ್ ಅವರ ಮಾತಿನ ಧಾಟಿ ಬದಲಾಗಿರುವುದು ಪೈಲಟ್ ವಿರುದ್ಧ ಅವರು ಕಾರಿದ್ದ ದ್ವೇಷಕ್ಕೆ ವಿರುದ್ಧವಾಗಿದೆ. ಪೈಲಟ್ ವಿರುದ್ಧ ದಾಳಿಯಲ್ಲಿ ಕಟುವಾದ ಶಬ್ದಗಳನ್ನು ಬಳಸಿದ್ದ ಗೆಹ್ಲೋಟ್ ಅವರನ್ನು ‘ನಿಕಮ್ಮಾ’ಎಂದು ಬಣ್ಣಿಸಿದ್ದರು.

‘ಶಾಸಕರ ದೂರುಗಳನ್ನು ಬಗೆಹರಿಸಲು ಮೂವರು ಸದಸ್ಯರ ಸಮಿತಿಯೊಂದನ್ನು ಕಾಂಗ್ರೆಸ್ ಹೈಕಮಾಂಡ್ ರಚಿಸಿದೆ. ಸರಕಾರವನ್ನು ಉರುಳಿಸಲು ಬಿಜೆಪಿ ಎಲ್ಲ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಅಂತ್ಯದಲ್ಲಿ ನಮ್ಮ ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ,ಯಾರೂ ನಮ್ಮನ್ನು ಬಿಟ್ಟು ಹೋಗಿಲ್ಲ ’ಎಂದು ಗೆಹ್ಲೋಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News