ಕಾಬೂಲ್‌ನ ಗುರುದ್ವಾರದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದು ಅಫ್ಘಾನ್ ಪ್ರಜೆ, ಕಾಸರಗೋಡಿನ ವ್ಯಕ್ತಿ ಅಲ್ಲ: ವರದಿ

Update: 2020-08-11 17:03 GMT

ಹೊಸದಿಲ್ಲಿ, ಆ. 10: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರದ ಮೇಲೆ ಮಾರ್ಚ್ 25ರಂದು ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಆತ್ಮಾಹುತಿ ಬಾಂಬರ್‌ಗಳಲ್ಲಿ ಓರ್ವ ಕೇರಳದ ಕಾಸರಗೋಡಿನ ವ್ಯಕ್ತಿ ಎಂದು ಶಂಕಿಸಲಾಗಿತ್ತು. ಆದರೆ, ಆತ ಕಾಸರಗೋಡಿನ ವ್ಯಕ್ತಿ ಅಲ್ಲ ಎಂದು ಈಗ ತಿಳಿದು ಬಂದಿದೆ ಎಂದು theprint.in ವರದಿ ಮಾಡಿದೆ.

ಕಾಸರಗೋಡಿನವನೆಂದು ಶಂಕಿಸಲಾದ 21 ವರ್ಷದ ಮುಹಮ್ಮದ್ ಮುಹ್ಸಿನ್ ಆಲಿಯಾಸ್ ಅಬು ಖಾಲಿದ್ ಅಲ್-ಹಿಂದಿಯ ಡಿಎನ್‌ಎ ಪರೀಕ್ಷೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಇದರಿಂದ ಆತ ಕಾಸರಗೋಡಿನ ವ್ಯಕ್ತಿ ಅಲ್ಲ. ಅಫ್ಘಾನಿಸ್ತಾನದ ಪ್ರಜೆ ಎಂಬುದು ದೃಢಪಟ್ಟಿದೆ ಎಂದು ಎಂದು theprint.in ಹೇಳಿದೆ.

ಭಾರತೀಯ ಬೇಹುಗಾರಿಕೆ ಸಂಸ್ಥೆ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಆಗ ಕಳುಹಿಸಲಾದ ಮಾಹಿತಿಯಂತೆ ಆತ್ಮಾಹುತಿ ಬಾಂಬರ್ ಭಾರತೀಯ ಅಲ್ಲ ಎಂದು ವರದಿ ಹೇಳಿರುವುದಾಗಿ ಭದ್ರತಾ ಸಂಸ್ಥೆಯ ಮೂಲಗಳು theprint.inಗೆ ತಿಳಿಸಿದೆ. ಮಾರ್ಚ್ 25ರಂದು ಗುರುದ್ವಾರದಲ್ಲಿ ನೂರಾರು ಜನರು ಪ್ರಾರ್ಥನೆ ನಡೆಸುತ್ತಿದ್ದ ಸಂದರ್ಭ ಮೂವರು ಬಂದೂಕುಧಾರಿಗಳು ನುಗ್ಗಿ ಭಾರತೀಯ ಪ್ರಜೆಗಳು ಸೇರಿದಂತೆ 25 ಮಂದಿಯನ್ನು ಹತ್ಯೆಗೈದಿದ್ದರು. ಈ ದಾಳಿಯ ಹೊಣೆಯನ್ನು ಅಫಘಾನಿಸ್ಥಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಐಸಿಸ್‌ನ ಘಟಕವಾದ ‘ದಿ ಐಸಿಸ್-ಖೋರಸಾನ್ ಪ್ರೊವಿನ್ಸ್’ (ಐಎಸ್‌ಕೆಪಿ) ಹೊತ್ತುಕೊಂಡಿತ್ತು.

ಇದಕ್ಕೆ ಸಂಬಂಧಿಸಿ ಐಸಿಸ್‌ಗೆ ಸಂಬಂಧಿಸಿದ ‘ಅಮಖ್’ ಸುದ್ದಿ ಸಂಸ್ಥೆ ‘56 ಅಸಾಲ್ಟ್ ರೈಫಲ್’ ಹಿಡಿದ ಯುವಕನೋರ್ವನ ಭಾವಚಿತ್ರವನ್ನು ಬಿಡುಗಡೆ ಮಾಡಿತ್ತು. ಈತ 2016ರಲ್ಲಿ ಇತರ 14 ಮಂದಿಯೊಂದಿಗೆ ಐಸಿಸ್‌ಗೆ ಸೇರಿದ್ದಾನೆಂದು ಹೇಳಲಾದ ಕಾಸರಗೋಡಿನ ನಿವಾಸಿ ಮುಹ್ಸಿನ್‌ನ ಭಾವಚಿತ್ರ ಎಂದು ತನಿಖಾ ಸಂಸ್ಥೆ ಸಂಶಯಿಸಿತ್ತು. ವಿದೇಶಿ ನೆಲದಲ್ಲಿ ಭಾರತೀಯರು ಮೃತಪಟ್ಟ ಹಾಗೂ ಓರ್ವ ಬಾಂಬರ್ ಭಾರತೀಯನೆಂದು ಶಂಕಿಸಿದ ಬಳಿಕ ಕಾಬೂಲ್ ದಾಳಿಯ ತನಿಖೆ ನಡೆಸಲು ಭಾರತದ ಎನ್‌ಐಎ ಗಡಿಯಾಚೆಗಿನ ಮೊದಲ ಪ್ರಕರಣ ದಾಖಲಿಸಿತ್ತು.

ಆದರೆ, ಈಗ ದಾಳಿ ನಡೆಸಿದ ಬಾಂಬರ್ ಭಾರತೀಯನಲ್ಲ, ಬದಲಾಗಿ ಅಫ್ಘಾನ್ ಪ್ರಜೆ ಎಂಬುದು ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿದೆ. ಇದು ಎನ್‌ಐಎ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ಬೆಳವಣಿಗೆ 29 ಮಂದಿಯ ಸಾವಿಗೆ ಕಾರಣವಾದ ಆಗಸ್ಟ್ 3ರಂದು ನಡೆದ ಜಲಾಲಾಬಾದ್ ಜೈಲಿನ ಮೇಲಿನ ದಾಳಿಯಲ್ಲಿ ಭಾಗಿಯಾದ ಬಾಂಬರ್‌ಗಳಲ್ಲಿ ಕೂಡ ಓರ್ವ ಕೇರಳದ ಕಾಸರಗೋಡಿನ ವ್ಯಕ್ತಿ ಇದ್ದಾನೆ ಎಂಬ ವದಂತಿ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News