​ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನ ಸಂಚಾರ ಮುಕ್ತ

Update: 2020-08-11 17:38 GMT

ಮಂಗಳೂರು, ಆ.11: ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿ ಚಾರ್ಮಾಡಿ ಘಾಟ್‌ನಲ್ಲಿ ಭೂಕುಸಿತ ಉಂಟಾಗಿತ್ತು. ಸದ್ಯ ಮಣ್ಣು ತೆರವುಗೊಳಿಸ ಲಾಗಿದ್ದು, ಆ.12ರಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ರಾ.ಹೆ. 73ರ ಮಂಗಳೂರು-ವಿಲ್ಲುಪುರಂ ರಸ್ತೆಯ 76 ಕಿ.ಮೀ.ನಿಂದ 86.200 ವರೆಗೆ ಬರುವ ಜಿಲ್ಲಾ ವ್ಯಾಪ್ತಿಯ ಪ್ರದೇಶದಲ್ಲಿ ವಿವಿಧೆಡೆ ಭೂಕುಸಿತ ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ಆ.7ರಿಂದ ಆ.11ರಂದು ರಾತ್ರಿ 12 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಭೂಕುಸಿತ ಭಾಗಗಳನ್ನು ತೆರವುಗೊಳಿಸಿದ್ದು, ಸಂಪರ್ಕಕ್ಕೆ ಅನುವು ಮಾಡಿಕೊಡಲಾಗಿದೆ.

ಆ.12ರಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಎಲ್ಲ ರೀತಿಯ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಸಂಜೆ 7ರಿಂದ ಬೆಳಗ್ಗೆ 7ಗಂಟೆವರೆಗೆ ಲಘು ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಆ.7ರಂದು ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಅಂಶವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News