ಬೆಳ್ತಂಗಡಿ ಶಾಸಕರಿಂದ ಕಾಳಜಿ ಫಂಡ್ ಹೆಸರಿನಲ್ಲಿ ಅವ್ಯವಹಾರ : ವಸಂತ ಬಂಗೇರ ಆರೋಪ, ತನಿಖೆಗೆ ಆಗ್ರಹ

Update: 2020-08-11 18:15 GMT
ವಸಂತ ಬಂಗೇರ

ಬೆಳ್ತಂಗಡಿ, ಆ.11: ತಾಲೂಕಿನಲ್ಲಿ ಕಳೆದ ವರ್ಷ ಸಂಭವಿಸಿದ ಭಾರೀ ಪ್ರವಾಹ ಹಾಗೂ ಭೂ ಕುಸಿತದ ಸಂದರ್ಭ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ‘ಕಾಳಜಿ ಫಂಡ್’ ಹೆಸರಿನಲ್ಲಿ ಸಾರ್ವಜನಿಕರಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹ ಮಾಡಿದ್ದಾರೆ. ಇದೀಗ ಒಂದು ವರ್ಷ ಕಳೆದರೂ ಅದರಿಂದ ಯಾರಿಗೂ ಒಂದು ರೂ. ಕೂಡಾ ವಿತರಿಸಿಲ್ಲ. ಇದರಲ್ಲಿ ಭಾರೀ ಅವ್ಯವಹಾರವಾಗಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಒತ್ತಾಯಿಸಿದ್ದಾರೆ.

ಬೆಳ್ತಂಗಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಸಿಲುಕಿದವರ ಹೆಸರಿನಲ್ಲಿ ಕೋಟ್ಯಂತರ ರೂ.ಗಳ ಸಂಗ್ರಹವಾಗಿದೆ. ಅದಲ್ಲದೆ ಲೋಡುಗಟ್ಟಲೆ ಅಕ್ಕಿ, ದಿನಬಳಕೆಯ ಸಾಮಗ್ರಿಗಳು, ದನಗಳಿಗೆ ಮೇವು ಸಂಗ್ರಹವಾಗಿದೆ. ಆದರೆ ಇವೆಲ್ಲ ಏನಾದವು, ಯಾರಿಗೆ ಹಂಚಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಇದರ ವಿತರಣೆಯಲ್ಲೂ ಅವ್ಯವಹಾರವಾಗಿದೆ. ಇವೆಲ್ಲದರ ಬಗ್ಗೆ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ, ರಾಜ್ಯಪಾಲರಿಗೆ, ಸರಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಸರಕಾರದ ಅನುಮತಿಯಿಲ್ಲದೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಅವಕಾಶವಿಲ್ಲವಾದರೂ ಶಾಸಕರು ತಾನೇ ಒಂದು ಸಮಿತಿ ರಚಿಸಿಕೊಂಡು ಅದರ ಅಧ್ಯಕ್ಷನೆಂದು ಘೋಷಿಸಿಕೊಂಡು ಹಣ ಸಂಗ್ರಹಿಸಿದ್ದಾರೆ. ಸೇವಾ ಸಹಕಾರಿ ಬ್ಯಾಂಕ್‌ಗಳಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಲಾಗಿದೆ. ಆದರೆ ಒಂದು ವರ್ಷ ಕಳೆದರೂ ಇದರ ಬಗ್ಗೆ ಯಾರಿಗೂ ಯಾವುದೇ ಲೆಕ್ಕವನ್ನೂ ನೀಡಿಲ್ಲ. ಯಾರಿಗೂ ಹಣವನ್ನೂ ವಿತರಿಸಿಲ್ಲ. ಎಷ್ಟು ಹಣ ಸಂಗ್ರಹವಾಗಿದೆ ಅದನ್ನು ಏನು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಬಂಗೇರ ಒತ್ತಾಯಿಸಿದ್ದಾರೆ.

ಪ್ರವಾಹದಲ್ಲಿ ಸಮಸ್ಯೆಗೀಡಾದವರಿಗಾಗಿ ಸಂಗ್ರಹಿಸಿದ ಹಣವನ್ನು ಕೂಡಲೇ ವಿತರಿಸಿದರೆ ಅವರಿಗೆ ಅದರಿಂದ ಪ್ರಯೋ ಜನ. ಆದರೆ ಇಲ್ಲಿ ಒಂದು ವರ್ಷವಾದರೂ ಅದನ್ನು ವಿತರಿಸದಿರುವುದನ್ನು ನೋಡಿದರೆ ಇದರಲ್ಲಿ ಅವ್ಯವಹಾರವಾಗಿರುವುದು ಸ್ಪಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರಕಾರ ಕೂಡಲೇ ಹಣ ಸಂಗ್ರಹದ ಬಗ್ಗೆ ತನಿಖೆಗೆ ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಬೇಕಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಪ್ರವಾಹ ಪೀಡಿತರಿಗೆ ಸರಕಾರದಿಂದಲೂ ಸರಿಯಾಗಿ ಸೌಲಭ್ಯಗಳು ಬಂದಿಲ್ಲ ಎಂದು ಆರೋಪಿಸಿದ ಅವರು, ಸಂತ್ರಸ್ಥರ ಪಟ್ಟಿ ತಯಾರಿಯಲ್ಲೂ ಅಕ್ರಮವಾಗಿದೆ. ಮನೆಗೆ ಯಾವುದೇ ತೊಂದರೆಯಾಗದವರಿಗೂ ಹೊಸ ಮನೆ ಮಂಜೂರು ಮಾಡಲಾಗಿದೆ. ನಿಜ ವಾದ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಕೃಷಿ ಕಳೆದು ಕೊಂಡವರಿಗೂ ಸರಿಯಾಗಿ ಪರಿಹಾರ ಸಿಲ್ಕಿಲ್ಲ ಈ ಬಗ್ಗೆಯೂ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ವಸಂತ ಬಂಗೇರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ. ಗೌಡ, ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಮುಖಂಡ ಮನೋಹರ್ ಕುಮಾರ್ ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲಿ 15 ಶೇ. ಕಮಿಶನ್ ವ್ಯವಹಾರ ನಡೆಯುತ್ತಿದೆ. ಹಿಂದೆ ಮಂಜೂರಾಗಿದ್ದ ಕಾಮಗಾರಿಗಳಲ್ಲೂ ಈಗ ಕಮಿಶನ್ ಕೇಳುತ್ತಿದ್ದಾರೆ. ಕೆಲವರು ಕಮಿಶನ್ ಕೊಡಲಾಗದೆ ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಕಾಮಗಾರಿ ನಡೆಯ ಬೇಕಾದರೆ ಕಮಿಶನ್ ನೀಡಬೇಕಾದ ಅನಿವಾರ್ಯ ವಾತಾವರಣ ನಿರ್ಮಾಣವಾಗಿದೆ. ಇದು ಅತ್ಯಂತ ಅಪಾಯಕಾರಿ. ಇದರಿಂದಾಗಿ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಿದಂತಾಗುತ್ತದೆ
- ಕೆ.ವಸಂತ ಬಂಗೇರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News