ಉದ್ಯೋಗ ವೀಸಾ ವಿತರಣೆ ತಡೆಯಿಂದ ಅಮೆರಿಕಕ್ಕೆ ಹಾನಿ

Update: 2020-08-11 18:46 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಆ. 11: ಕೌಶಲಭರಿತ ವಿದೇಶಿ ಕೆಲಸಗಾರರಿಗೆ ವೀಸಾಗಳನ್ನು ನೀಡುವುದನ್ನು ತಡೆಯುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರದಿಂದ ದೇಶಕ್ಕೆ ಹಾನಿಯಾಗಿದೆ ಎಂದು ಅಮೆರಿಕದ ದೈತ್ಯ ತಂತ್ರಜ್ಞಾನ ಕಂಪೆನಿಗಳಾದ ಅಮೆಝಾನ್, ಆ್ಯಪಲ್ ಮತ್ತು ಫೇಸ್‌ಬುಕ್‌ಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಗಳಲ್ಲಿ ತಿಳಿಸಿವೆ.

ಜೂನ್‌ನಲ್ಲಿ ಟ್ರಂಪ್ ಹೊರಡಿಸಿರುವ ಸರಕಾರಿ ಆದೇಶವನ್ನು ಪ್ರಶ್ನಿಸಿ, ಅಮೆರಿಕ ವಾಣಿಜ್ಯ ಸಂಸ್ಥೆ ಮತ್ತು ಇತರ ಉದ್ಯಮ ಗುಂಪುಗಳು ಫೆಡರಲ್ ನ್ಯಾಯಾಲಯವೊಂದರಲ್ಲಿ ಹೂಡಿರುವ ಮೊಕದ್ದಮೆಗೆ ಪೂರಕವಾಗಿ ಈ ತಂತ್ರಜ್ಞಾನ ಕಂಪೆನಿಗಳು ಸೋಮವಾರ ತಮ್ಮ ಹೇಳಿಕೆಗಳನ್ನು ಸಲ್ಲಿಸಿವೆ.

ಜೂನ್ 23ರಂದು ಸರಕಾರಿ ಆದೇಶವೊಂದನ್ನು ಹೊರಡಿಸಿದ ಟ್ರಂಪ್, ಎಚ್-1ಬಿ ಸೇರಿದಂತೆ ಹಲವು ಉದ್ಯೋಗ ವೀಸಾಗಳನ್ನು ವಿದೇಶಿ ಕುಶಲ ಕೆಲಸಗಾರರಿಗೆ ಈ ವರ್ಷದ ಕೊನೆಯವರೆಗೆ ನೀಡುವುದನ್ನು ನಿಷೇಧಸಿದ್ದಾರೆ. ಕೊರೋನ ವೈರಸ್ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೇಶದ ಜನರಿಗೆ ಉದ್ಯೋಗಗಳು ಲಭಿಸುವಂತೆ ಖಾತರಿಪಡಿಸಲು ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದರು. ಈ ವರ್ಷದ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಈ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

‘‘ಅಮೆರಿಕದ ಉದ್ಯೋಗಿಗಳನ್ನು ‘ರಕ್ಷಿಸುವುದಕ್ಕಾಗಿ’ ಹಲವಾರು ಉದ್ಯೋಗ ವೀಸಾಗಳ ವಿತರಣೆಯನ್ನು ಅಧ್ಯಕ್ಷ ಟ್ರಂಪ್ ಅಮಾನತಿನಲ್ಲಿಟ್ಟಿರುವುದರಿಂದ ವಾಸ್ತವವಾಗಿ ಅಮೆರಿಕದ ಉದ್ಯೋಗಿಗಳು, ಅವರ ಉದ್ಯೋಗದಾತರು ಹಾಗೂ ಅಮೆರಿಕದ ಆರ್ಥಿಕತೆಗೆ ಹಾನಿಯಾಗಿದೆ’’ ಎಂದು 50ಕ್ಕೂ ಹೆಚ್ಚಿನ ತಂತ್ರಜ್ಞಾನ ಕಂಪೆನಿಗಳು ಮತ್ತು ಇತರ ಸಂಘಟನೆಗಳು ಸಹಿ ಹಾಕಿರುವ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News