ಉಪಾಧ್ಯಕ್ಷ ಹುದ್ದೆಗೆ ಕಮಲಾ ಹ್ಯಾರಿಸ್ ಅಭ್ಯರ್ಥಿ: ಭಾರತೀಯ ಮೂಲದ ಅಮೆರಿಕನ್ನರಲ್ಲಿ ಸಂತಸ

Update: 2020-08-12 14:21 GMT
ಕಮಲಾ ಹ್ಯಾರಿಸ್

 ವಾಷಿಂಗ್ಟನ್,ಆ.12: ಭಾರತೀಯ ಮೂಲದ ಮಹಿಳೆ, ಸೆನೆಟರ್ ಕಮಲಾ ಹ್ಯಾರಿಸ್(55) ಅವರು ನವಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯಲ್ಲಿ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮಣಿಸಿ ಶ್ವೇತಭವನವನ್ನು ಪ್ರವೇಶಿಸುವ ಕನಸನ್ನು ಹೊತ್ತಿರುವ ಡೆಮಾಕ್ರಾಟ್ ಜೋ ಬಿಡೆನ್(77) ಅವರು ಮಂಗಳವಾರ ಈ ವಿಷಯವನ್ನು ಪ್ರಕಟಿಸಿದರು.

 ಇದರೊಂದಿಗೆ ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಾಗಿ ಡೆಮಾಕ್ರಾಟಿಕ್ ಪಕ್ಷದ ತಿಂಗಳುಗಳ ಹುಡುಕಾಟಕ್ಕೆ ಕೊನೆಗೂ ತೆರೆಬಿದ್ದಿದ್ದು, ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಮೊದಲ ಅಮೆರಿಕನ್ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

‘ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಸಹವರ್ತಿಯಾಗಿ ಶ್ರೀಸಾಮಾನ್ಯರಿಗಾಗಿ ನಿರ್ಭೀತಿಯ ಹೋರಾಟಗಾರ್ತಿ ಮತ್ತು ದೇಶದ ಅತ್ಯುತ್ತಮ ಸಾರ್ವಜನಿಕ ಸೇವಕರಲ್ಲೊಬ್ಬರಾಗಿರುವ ಕಮಲಾ ಹ್ಯಾರಿಸ್ ಅವರ ಆಯ್ಕೆಯನ್ನು ಪ್ರಕಟಿಸುವುದು ನನ್ನ ಪಾಲಿಗೆ ಸಂದಿರುವ ಮಹಾನ್ ಗೌರವವಾಗಿದೆ ’ ಎಂದು ಬಿಡೆನ್ ಟ್ವೀಟಿಸಿದ್ದಾರೆ. ಈ ಅಭಿಯಾನದಲ್ಲಿ ಅವರು ತನ್ನ ಸಹಭಾಗಿಯಾಗಿರುವುದು ತನಗೆ ಹೆಮ್ಮೆಯನ್ನುಂಟು ಮಾಡಿದೆ ಎಂದೂ ಬಿಡೆನ್ ತಿಳಿಸಿದ್ದಾರೆ.

2020ರ ವಿಶಿಷ್ಟ ಶೈಲಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಲಾದ ಈ ನಿರ್ಧಾರವು ಟ್ರಂಪ್ ಅವರನ್ನು ಶ್ವೇತಭವನದಿಂದ ಹೊರದಬ್ಬಲು ಮತದಾರರ ಕ್ರೋಢಿಕರಣದಲ್ಲಿ ತೊಡಗಿರುವ ಬಿಡೆನ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಪ್ರಕಟಣೆಯ ಬೆನ್ನಲ್ಲೇ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಹ್ಯಾರಿಸ್,ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ತನ್ನನ್ನು ಆಯ್ಕೆ ಮಾಡಿರುವುದು ತನಗೆ ಸಂದಿರುವ ಗೌರವವಾಗಿದೆ ಮತ್ತು ಬಿಡೆನ್ ಅವರನ್ನು ಅಧ್ಯಕ್ಷ ಹುದ್ದೆಗೇರಿಸಲು ಅಗತ್ಯವಿರುವುದನ್ನೆಲ್ಲ ಮಾಡುತ್ತೇನೆ ಎಂದು ಹೇಳಿದ್ದಾರೆ.

‘ಬಿಡೆನ್ ಅವರು ಜೀವಮಾನವೆಲ್ಲ ನಮಗಾಗಿ ಹೋರಾಡಿರುವುದರಿಂದ ಅವರು ಅಮೆರಿಕದ ಜನರನ್ನು ಒಂದುಗೂಡಿಸಬಲ್ಲರು ಮತ್ತು ಅಧ್ಯಕ್ಷರಾಗಿ ಅವರು ಅಮೆರಿಕವನ್ನು ನಮ್ಮ ಆದರ್ಶಗಳಿಗನುಗುಣವಾಗಿ ನಿರ್ಮಿಸಬಲ್ಲರು ’ ಎಂದೂ ಹ್ಯಾರಿಸ್ ಬರೆದಿದ್ದಾರೆ.

ಭವಿಷ್ಯದಲ್ಲಿ ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಅರ್ಹರಾಗಿರುವುದು ಹ್ಯಾರಿಸ್ ಪಾಲಿಗೆ ಜೀವಮಾನದ ರಾಜಕಿಯ ಅವಕಾಶವಾಗಿದೆ. ಅವರು ಈ ಚುನಾವಣೆಯಲ್ಲಿ ಗೆದ್ದರೆ 2024 ಅಥವಾ 2028ರಲ್ಲಿ ಅಧ್ಯಕ್ಷ ಹುದ್ದೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುತ್ತಾರೆ.

ತನ್ನ ರಾಜಕೀಯ ಜೀವನದುದ್ದಕ್ಕೂ ತಡೆಗಳನ್ನು ಭೇದಿಸಿ ಮುನ್ನುಗ್ಗುವುದನ್ನೇ ರೂಢಿಸಿಕೊಂಡಿರುವ ಹ್ಯಾರಿಸ್‌ರ ಹೆತ್ತವರು ಅಮೆರಿಕಕ್ಕೆ ವಲಸಿಗರಾಗಿದ್ದು,ತಂದೆ ಜಮೈಕಾ ಮತ್ತು ತಾಯಿ ಭಾರತದವರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹ್ಯಾರಿಸ್ ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿರುವ ಎರಡನೇ ಕಪ್ಪು ಮಹಿಳೆ ಮತ್ತು ಮೊದಲ ದಕ್ಷಿಣ ಏಷ್ಯಾ ಮೂಲದ ಮಹಿಳೆಯಾಗಿದ್ದಾರೆ. ಅವರು ಸೆನೆಟ್‌ನಲ್ಲಿ ಕ್ಯಾಲಿಫೋರ್ನಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.

2020ರ ಚುನಾವಣೆಗೆ ಮೊದಲ ಡೆಮಾಕ್ರಾಟಿಕ್ ಚರ್ಚೆಯ ಸಂದರ್ಭದಲ್ಲಿ ಹ್ಯಾರಿಸ್ ಬಿಡೆನ್ ಅವರನ್ನು ವಿರೋಧಿಸಿದ್ದರಾದರೂ ಬಳಿಕ 2019ರ ಡಿಸೆಂಬರ್‌ನಲ್ಲಿ ಪೈಪೋಟಿಯಿಂದ ಹಿಂದೆ ಸರಿದಿದ್ದರು ಮತ್ತು 2020 ಮಾರ್ಚ್‌ನಲ್ಲಿ ಬಿಡೆನ್‌ಗೆ ಬೆಂಬಲವನ್ನು ಘೋಷಿಸಿದ್ದರು.

ಹ್ಯಾರಿಸ್ ಆಯ್ಕೆಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಿತಿಯು, ಅವರು ವಿಪರೀತದ ರಾಜಕಿಯ ನಿಲುವುಗಳನ್ನು ಹೊಂದಿದ್ದು,ಅವು ಮಧ್ಯಮ ಧೋರಣೆಯ ಬಿಡೆನ್‌ಗಿಂತ ಹೆಚ್ಚು ಎಡಪಂಥೀಯವಾಗಿವೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News