ಕಾವಲ್ ಭೈರಸಂದ್ರ ಹಿಂಸಾಚಾರ ಪೂರ್ವನಿಯೋಜಿತ ಷಡ್ಯಂತ್ರ : ಗೃಹ ಸಚಿವ ಬೊಮ್ಮಾಯಿ

Update: 2020-08-12 06:58 GMT

ಉಡುಪಿ, ಆ.12: ಕಾವಲ್ ಭೈರಸಂದ್ರದಲ್ಲಿ ನಡೆದ ಹಿಂಸಾಚಾರದಲ್ಲಿ ಮನಸೋ ಇಚ್ಛೆ ವರ್ತಿಸಿದಾಗ ಕೊನೆಯ ಅಸ್ತ್ರವಾಗಿ ಗೋಲಿಬಾರ್ ಮಾಡಲಾಗಿದೆ. ಇದರಿಂದ ಮೂರು ಮಂದಿ ಮೃತಪಟ್ಟಿದ್ದಾರೆ. ಪುಂಡಾಟದ ಮೂಲಕ ಸಮಾಜ ಹದಗೆಡಿಸಲು ಹಲವರು ಪ್ರಯತ್ನ ಮಾಡಿದ್ದು, ನಿಯಂತ್ರಣ ಸಂಪೂರ್ಣ ತಪ್ಪಿದಾಗ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದಿಂದ ಪೊಲೀಸರಿಗೂ ಗಾಯಗಳಾಗಿವೆ. ಒಬ್ಬರು ಪೊಲೀಸರ ತಲೆಗೆ ಗಂಭೀರ ಗಾಯವಾಗಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಈಗಾಗಲೇ 110 ಮಂದಿಯನ್ನು ಬಂಧಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದರು.

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಗೃಹ ಕಾರ್ಯದರ್ಶಿಯ ಸಂಪರ್ಕ ದಲ್ಲಿ ಇದ್ದೇವೆ. ಆರು ಕಂಪನಿ ಸಿಆರ್‌ಪಿಎಫ್ ಬರುತ್ತಿದೆ. ಮೂರು ಹೈದರಾಬಾದಿನ ಹಾಗೂ ಮೂರು ಚೆನ್ನೈನಿಂದ ಬರುತ್ತಿದೆ. ಎಲ್ಲಿ ನಿಯೋಜಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದರು.

ರ್ಯಾಪಿಡ್ ಅಕ್ಷನ್ ಫೋರ್ಸ್ ಬರುತ್ತಿದೆ. ಗರುಡ ಫೋರ್ಸ್ ಕೂಡ ಸ್ಥಳದಲ್ಲಿದೆ. ಎರಡು ಪ್ರದೇಶ ಸಂಪೂರ್ಣ ಪೊಲೀಸರ ಹತೋಟಿಯಲ್ಲಿದೆ. ಇನ್ನಷ್ಟು ಬಂಧನ ಆಗಲು ಬಾಕಿ ಇದೆ. ಗಲಭೆಕೋರರ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ಮಾಡುತ್ತೇವೆ. ಸಿಎಂ ಜೊತೆ ಬೆಳಗ್ಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮಧ್ಯಾಹ್ನ ಸಿಎಂ ಮತ್ತು ಹಿರಿಯ ಅಧಿಕಾರಿ ಜೊತೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸಿಸಿ ಕ್ಯಾಮರ ದಾಖಲೆಯನ್ನು ಸಂಗ್ರಹಿಸುತ್ತೇವೆ. ಗಲಭೆಯಲ್ಲಿ ಮುಂಚೂಣಿಯಲ್ಲಿದ್ದವರ ಮಾಹಿತಿ ಸಂಗ್ರಹವಾಗುತ್ತಿದೆ. ಫೇಸ್ ಬುಕ್ ನಲ್ಲಿ ಚರ್ಚೆ ಮಾಡಿ ಕರೆ ಕೊಟ್ಟಿದ್ದಾರೆ. ಸ್ಥಳೀಯರು ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಇದು ಪೂರ್ವನಿಯೋಜಿತ ಷಡ್ಯಂತ್ರವಾಗಿದೆ. ಇದು ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನವಾಗಿದೆ. ಶಾಂತಿಯನ್ನು ಸಹಿಸದ ಸಮಾಜಘಾತಕ ಶಕ್ತಿಗಳು ಸಂದರ್ಭದ ಉಪಯೋಗ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News