ಸಿಬಿಎಸ್ ಇ ಟಾಪರ್ ವಿದ್ಯಾರ್ಥಿನಿಯ ಸಾವು ಪ್ರಕರಣ: ವಿಮೆ ಹಣಕ್ಕಾಗಿ ಕಥೆ ಕಟ್ಟಿದರೇ ಸಂಬಂಧಿಕರು?

Update: 2020-08-12 12:17 GMT

ಬುಲಂದಶಹರ್: ಅಮೆರಿಕಾದ ಮೆಸೆಚುಸೆಟ್ಸ್‍ ನಲ್ಲಿ ಪ್ರತಿಷ್ಠಿತ ಬೇಬ್ಸನ್ ಕಾಲೇಜಿನ ವಿದ್ಯಾರ್ಥಿ ವೇತನ ಪಡೆದು ಅಲ್ಲಿಯೇ ಶಿಕ್ಷಣ ಪಡೆಯುತ್ತಿದ್ದ ಬುಲಂದ್‍ಶಹರ್‍ ನ ಸಿಬಿಎಸ್‍ಇ ಟಾಪರ್ 20 ಹರೆಯದ ಯುವತಿ ಸುದೀಕ್ಷಾ ಭಾಟಿ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದುಷ್ಕರ್ಮಿಗಳು ಕಿರುಕುಳ ನೀಡಿದ್ದರಿಂದ ಸುದೀಕ್ಷಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆಂಬ ಕುಟುಂಬಸ್ಥರ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ‘ಕಿರುಕುಳದ ಪುರಾವೆಯಿಲ್ಲ’ ಎಂದಿದ್ದಾರಲ್ಲದೆ ‘ವಿಮಾ ಹಣದ ಬಗ್ಗೆ ಯೋಚಿಸಿ’  ಸಂಬಂಧಿಕರು ಈ ಪ್ರಕರಣಕ್ಕೆ ‘ತಿರುವು’ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಆಕೆಯ ಕುಟುಂಬದ ಪ್ರಕಾರ ಸೋಮವಾರ ಬೆಳಿಗ್ಗೆ ಆಕೆ ತನ್ನ ಮಾವ ಹಾಗೂ ಸೋದರ ಸಂಬಂಧಿಯೊಂದಿಗೆ ಮೋಟಾರ್ ಸೈಕಲ್‍ ನಲ್ಲಿ ತೆರಳುತ್ತಿದ್ದಾಗ ಇತರ ಇಬ್ಬರು ಬೈಕ್ ಸವಾರರು ಉದ್ದೇಶಪೂರ್ವಕವಾಗಿ ಎರಡು ಬಾರಿ ಓವರ್‍ ಟೇಕ್ ಮಾಡಿ ನಂತರ ಬೈಕ್ ನಿಲ್ಲಿಸಿದ್ದರು. ಆಕೆಯ ಮಾವ ಕೂಡ ಹಠಾತ್ ಆಗಿ ಬ್ರೇಕ್ ಹಾಕಿದಾಗ ಆಕೆ ನೆಲಕ್ಕುರುಳಿ ತಲೆಗಾದ ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಮೃತಪಟ್ಟಿದ್ದರು. ಆದರೆ ಪೊಲೀಸರು ಮಾತ್ರ ಸುದೀಕ್ಷಾ ಇದ್ದ ಬೈಕ್ ಅನ್ನು ಅಪ್ರಾಪ್ತನಾಗಿದ್ದ ಆಕೆಯ ಸೋದರ ಸಂಬಂಧಿ ಚಲಾಯಿಸುತ್ತಿದ್ದ ಎನ್ನುತ್ತಿದ್ದಾರಲ್ಲದೆ, ಆಕೆಯ ಮಾವ ಘಟನಾ ಸ್ಥಳಕ್ಕೆ ಎರಡು ಗಂಟೆಯ ನಂತರ ತಲುಪಿದರು ಎನ್ನುತ್ತಿದ್ದಾರೆ.

“ಜನರು ಈ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದ್ದಾರೆ. ಆಕೆ ದೊಡ್ಡ ವಿದ್ಯಾರ್ಥಿವೇತನ ಪಡೆಯುತ್ತಿದ್ದಳು ಹಾಗೂ ಕೆಲವರು ವಿಮಾ ಹಣದ ಬಗ್ಗೆ ಯೋಚಿಸಿದರು. ಬೈಕ್ ಚಲಾಯಿಸುತ್ತಿದ್ದ ಹುಡುಗ ಹೈಸ್ಕೂಲ್ ಪಾಸ್ ಆಗಿದ್ದನಷ್ಟೇ, ಆತ ಅಪ್ರಾಪ್ತನಾಗಿರಬೇಕು, ಪೊಲೀಸರನ್ನು ದೂರಲು ಪ್ರಯತ್ನಿಸಲಾಗುತ್ತಿದೆ. ಒಂದು ಸುಳ್ಳನ್ನು  50 ಬಾರಿ ಹೇಳಿದರೆ ಅದನ್ನು ಸತ್ಯವೆಂದೇ ನಂಬುತ್ತಾರೆ. ಆದರೆ ಕಿರುಕುಳ ನೀಡಲಾದ ಕುರಿತು ಯಾವುದೇ ಪುರಾವೆ ದೊರಕಿಲ್ಲ'' ಎಂದು ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News