ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಒಪ್ಪಿಗೆ: ಸಚಿವ ಬೊಮ್ಮಾಯಿ

Update: 2020-08-12 13:58 GMT

ಉಡುಪಿ, ಆ.12: ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು 300 ಬೆಡ್‌ನೊಂದಿಗೆ ಮೇಲ್ದರ್ಜೆಗೇರಿಸಲು ಈಗಾಗಲೇ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಹಣಕಾಸಿನ ಅನುಮೋದನೆ ಶೀಘ್ರವೇ ಮಾಡಿ, ಈ ವರ್ಷವೇ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ರಾಜ್ಯ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಕೊಡುಗೆಯಾಗಿ ನೀಡಿ ರುವ 11.20 ಲಕ್ಷ ರೂ. ವೆಚ್ಚದ ಎರಡು ವೆಂಟಿಲೇಟರ್‌ಗಳನ್ನು ಮಣಿಪಾಲ ಕಂಟ್ರಿ ಇನ್ ಹೊಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು.

ಪಿಎಂ ಕೇರ್ ಯೋಜನೆಯಡಿ ಉಡುಪಿ ಜಿಲ್ಲೆಗೆ ಮತ್ತೆ 19 ವೆಂಟಿಲೇಟರ್ ಗಳು ಮಂಜೂರಾಗಿದ್ದು, ಇವುಗಳು ಶೀಘ್ರವೇ ಬಿಡುಗಡೆಯಾಗಲಿವೆ. ಕೊರೋನ ರೋಗಿಗಳ ಜೀವ ಉಳಿಸುವ ಹೋರಾಟದಲ್ಲಿ ದಾನಿಗಳ ಪಾತ್ರ ಅತಿ ಮುಖ್ಯಾದುದು ಎಂದು ಅವರು ಹೇಳಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ರಾಜ್ಯ ಸರಕಾರದಿಂದ ಜಿಲ್ಲೆಗೆ 20 ವೆಂಟಿಲೇಟರ್ ಮಂಜೂರಾಗಿವೆ. ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಆಭರಣ ಸಂಸ್ಥೆ, ರೊಬೋಸಾಪ್ಟ್, ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ತಲಾ ಎರಡರಂತೆ ಒಟ್ಟು 10 ವೆಂಟಿಲೇಟರ್ ಕೊಡುಗೆಯಾಗಿ ನೀಡ ಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್, ಟ್ರಸ್ಟ್‌ನ ನಾಗರಾಜ್ ಶೆಟ್ಟಿ, ಎಚ್.ಎಸ್.ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News