ಮಂಗಳೂರು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರನ್ನು ತೆರವುಗೊಳಿಸುವ ಆದೇಶ ಹಿಂಪಡೆದ ಮನಪಾ

Update: 2020-08-12 16:30 GMT

ಮಂಗಳೂರು, ಆ.12: ಮಂಗಳೂರು ಸೆಂಟ್ರಲ್ ಮಾರುಕಟ್ಟೆಯ ತರಕಾರಿ, ಮೀನು ಹಾಗೂ ಇತರ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮಹಾನಗರ ಪಾಲಿಕೆಯ ಆಯುಕ್ತರು ಮಾರ್ಚ್ 7, 2020ರಂದು ನೀಡಿದ್ದ ಆದೇಶವನ್ನು ಆಗಸ್ಟ್‌ 11ರಂದು ಹಿಂದಕ್ಕೆ ಪಡೆದಿರುವುದಾಗಿ ಮನಪಾ ನ್ಯಾಯಾಲಯಕ್ಕೆ ತಿಳಿಸಿದೆ.

ಮಂಗಳೂರು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಿಗಳನ್ನು ಹಾಲಿ ಕಟ್ಟಡದಿಂದ ತೆರವುಗೊಳಿಸಲು ಏಕಾಏಕಿ ಮಹಾನಗರ ಪಾಲಿಕೆಯ ವತಿಯಿಂದ ಮಾಡಲಾದ ಆದೇಶದ ವಿರುದ್ಧ ಸೆಂಟ್ರಲ್ ಮಾರ್ಕೆಟ್ ನ ಸುಮಾರು 37 ವ್ಯಾಪಾರಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ರಾಜ್ಯದ  ಹೈಕೋರ್ಟ್ ನಲ್ಲಿ ಕಾನೂನು ಸಮರ ನಡೆಯುತ್ತಿತ್ತು. ವ್ಯಾಪಾರಸ್ಥರು ಮನಪಾ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದರು. ಅಂಗಡಿ ತೆರವುಗೊಳಿಸಲು ಮನಪಾ ವತಿಯಿಂದ ಸಲ್ಲಿಸಲಾದ ಅರ್ಜಿಗಳಿಗೂ ನ್ಯಾಯಾಲಯ ಸಮ್ಮತಿ ನೀಡಿರಲಿಲ್ಲ. ಈ ಪ್ರಕರಣದಲ್ಲಿ ನ್ಯಾಯಸಮ್ಮತವಾಗಿ ಕಾನೂನು ಪಾಲನೆ ಮಾಡುವಂತೆ ಮುಖ್ಯ ನ್ಯಾಯಾಧೀಶರ ಆದೇಶ ಹಿನ್ನೆಲೆಯಲ್ಲಿ ಮನಪಾ ಆಯುಕ್ತರು ವ್ಯಾಪಾರಸ್ಥರಿಗೆ ನೀಡಿದ್ದ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.

ಇದರಿಂದ ಕಾನೂನು ಹೋರಾಟದಲ್ಲಿ ಮನಪಾಕ್ಕೆ ಹಿನ್ನಡೆಯಾಗಿದ್ದು, ಸೆಂಟ್ರಲ್ ಮಾರ್ಕೆಟ್‌ ನ  ವ್ಯಾಪಾರಸ್ಥರಿಗೆ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಇದ್ದ ಅಡಚಣೆ ದೂರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News