​ಹಿಲಿಯಾಣ: ಗಾಳಿಗೆ ಬಾಳೆತೋಟ ಸಂಪೂರ್ಣ ಹಾನಿ

Update: 2020-08-12 16:39 GMT

ಉಡುಪಿ, ಆ.12: ಮೊನ್ನೆ ಸಂಜೆ ಬೀಸಿದ ಭಾರೀ ಗಾಳಿಗೆ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ಎಂ.ಎನ್.ಸುಬ್ರಹ್ಮಣ್ಯ ಎಂಬವರ ಬಾಳೆತೋಟ ಸಂಪೂರ್ಣ ಹಾನಿಗೊಳಗಾಗಿದೆ ಎಂದು ತಾಲೂಕು ಕಚೇರಿಯಿಂದ ತಿಳಿದುಬಂದಿದೆ.

ಸುಬ್ರಹ್ಮಣ್ಯ ಅವರ ತೋಟದಲ್ಲಿ 3000ಕ್ಕೂ ಅಧಿಕ ಬಾಳೆಗಿಡಗಳನ್ನು ಧರಾಶಾಹಿಯಾಗಿವೆ. ಇದರಿಂದ ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಅದೇ ಗ್ರಾಮದ ರವಿರಾಜ ಎಂಬವರ ತೋಟದ 13 ಅಡಿಕೆ ಮರಗಳು ಹಾಗೂ ಫ್ರಾನ್ಸಿಸ್ ಡಯಾಸ್ ಅವರ 30 ಅಡಿಕೆ ಮರಗಳೂ ಹಾನಿಗೊಂಡಿದ್ದು ಕ್ರಮವಾಗಿ 26,000ರೂ. ಹಾಗೂ 55,000ರೂ.ನಷ್ಟವಾಗಿದೆ.

ಇದರೊಂದಿಗೆ ಕೋಟೇಶ್ವರ ಗ್ರಾಮದ ಯಶೋದ, ಬೀಜಾಡಿ ಗ್ರಾಮದ ರಾಧಾ ದೇವಾಡಿಗ, ಹಾರಾಡಿಯ ಆನಂದ ಅಮೀನ್, ಜಯಂತಿ ಗಾಣಿಗ, ಕಾರ್ಕಳ ತಾಲೂಕು ಜಾರ್ಕಳದ ಆನಂದ ಆಚಾರ್ಯರ ಮನೆಗಳಿಗೆ ಗಾಳಿ-ಮಳೆ ಯಿಂದ ಭಾಗಶ: ಹಾನಿಯಾಗಿದ್ದು ಒಟ್ಟು ಸುಮಾರು 1.50 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಳೆಗಳಿಗೆ ಅಪಾರ ಹಾನಿ:  ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಬೆಳೆ ಹಾನಿಯಾಗಿ ಕುಷ್ಟಪ್ಪಶೆಟ್ಟಿ ಎಂಬವರಿಗೆ 10,000 ರೂ., ಸುರೇಂದ್ರ ಶೆಟ್ಟಿ ಎಂಬವರಿಗೆ 7,000ರೂ., ಗುಲಾಬಿ ಪೂಜಾರ್ತಿ ಎಂಬವರಿಗೆ 15,000ರೂ., ಗುಂಡು ಪೂಜಾರಿ ಎಂಬವರಿಗೆ 10,000ರೂ., ಸಾಕು ಪೂಜಾರ್ತಿ ಎಂಬವರಿಗೆ 12,000ರೂ., ಜಲಜ ಕುಲಾಲ್ತಿ ಎಂಬವರಿಗೆ 10,000ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಶೀನ ಎಂಬವರ ಮನೆ ಭಾಗಶಃ ಹಾನಿಯಾಗಿ 25,000ರೂ. ಮತ್ತು ಬೈಂದೂರು ತಾಲೂಕಿನ ಶಿರೂರು ಗ್ರಾಮದ ಮೋಹಿನಿ ದೇವಾಡಿಗ ಎಂಬವರ ಮನೆ ಭಾಗಶಃ ಹಾನಿಯಾಗಿ 50,000ರೂ. ನಷ್ಟ ಉಂಟಾಗಿದೆ. ಬ್ರಹ್ಮಾವರ ತಾಲೂಕಿನ ಹೇರಾಡಿ ಗ್ರಾಮದ ಆಶಾ ಗಾಣಿಗ ಎಂಬವರ ಮನೆ ಸಂಪೂರ್ಣ ಕುಸಿದು 3,00,000 ರೂ., ಪಾರಂಪಳ್ಳಿ ಗ್ರಾಮದ ದಯಾನಂದ ಮನೆ ಸಂಪೂರ್ಣ ಕುಸಿದು 100,000 ರೂ., ನೀಲಾವರ ಗ್ರಾಮದ ಪ್ರೇಮ ಆಚಾರ್ಯ ಮನೆ ಸಂಪೂರ್ಣ ಕುಸಿದು 1,50,000ರೂ., ಹಾರಾಡಿ ಗ್ರಾಮದ ಜಯಂತಿ ಗಾಣಿಗ ಮನೆಯ ಗೋಡೆ ಬಿದ್ದು 20ಸಾವಿರ ರೂ. ನಷ್ಟ ಉಂಟಾಗಿದೆ.

 ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 53 ಮಿ.ಮೀ. ಮಳೆ ಸುರಿದಿದೆ. ಉಡುಪಿಯಲ್ಲಿ 52, ಕುಂದಾಪುರದಲ್ಲಿ 44 ಹಾಗೂ ಕಾರ್ಕಳದಲ್ಲಿ 63ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News