ಚತ್ತೀಸ್‌ಗಢ: ಭದ್ರತಾ ಪಡೆಯಿಂದ ಎನ್‌ಕೌಂಟರ್; ನಾಲ್ವರು ಮಾವೋವಾದಿಗಳು ಹತ

Update: 2020-08-12 16:55 GMT

ರಾಯ್‌ಪುರ, ಆ. 12: ಚತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ ಮಾವೋವಾದಿಗಳು ಹಾಗೂ ಭದ್ರತಾ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾ ಪಡೆಯ ಸಂಯುಕ್ತ ತಂಡ ಜಾಗರ್ಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 9.30 ಗಂಟೆಗೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಈ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರ್ ರಾಜ್ ಹೇಳಿದ್ದಾರೆ.

ಜಾಗರ್ಗುಂಡನ ದುರ್ಗಮ ಪ್ರದೇಶದಲ್ಲಿ ಮಾವೋವಾದಿಗಳು ಬೀಡುಬಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಾಗೂ ಅದರ ಘಟಕ ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್ (ಕೋಬ್ರಾ) ಸೇರಿದಂತೆ ವಿವಿಧ ಭದ್ರತಾ ಪಡೆಗಳ ಸುಯಕ್ತ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತು ಎಂದು ಅವರು ತಿಳಿಸಿದ್ದಾರೆ.

ರಾಯಪುರದಿಂದ 450 ಕಿ.ಮೀ. ದೂರದಲ್ಲಿರುವ ಫುಲಂಪಾರ್ ಗ್ರಾಮದಲ್ಲಿ ತಂಡ ಗಸ್ತು ನಡೆಸುತ್ತಿದ್ದ ಸಂದರ್ಭ ಮಾವೋವಾದಿಗಳು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ನಾಲ್ವರು ಮಾವೋವಾದಿಗಳ ಮೃತದೇಹ ಪತ್ತೆಯಾಗಿವೆ. ಅಲ್ಲದೆ, .303 ರೈಫಲ್, ದೊಡ್ಡ ಪ್ರಮಾಣ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News