ಹೆಚ್ಚಿನ ಚೇತರಿಕೆ ಪ್ರಮಾಣವಿದ್ದರೂ, ಅನಾರೋಗ್ಯ ಪೀಡಿತರ ಸಂಖ್ಯೆಯಲ್ಲೂ ಹೆಚ್ಚಳ: ವರದಿ

Update: 2020-08-12 17:18 GMT

ಹೊಸದಿಲ್ಲಿ, ಆ.12: ದೇಶದಲ್ಲಿ ಕೊರೋನ ವೈರಸ್ ಸೋಂಕಿತರ ಚೇತರಿಕೆ ಪ್ರಮಾಣ ಈಗ 70% ದಾಟಿದ್ದರೂ, ಪ್ರತೀ ದಿನದ ಸರಾಸರಿ ಗಮನಿಸಿದರೆ ಚೇತರಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಜನ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ.

ಮಂಗಳವಾರದವರೆಗಿನ ಅಂಕಿಅಂಶದ ಪ್ರಕಾರ, ದೇಶದಲ್ಲಿ ಇದುವರೆಗೆ ಕೊರೋನ ಸೋಂಕಿಗೆ ಒಳಗಾದ 23.29 ಲಕ್ಷ ಜನರಲ್ಲಿ 70.38% ಜನ ಚೇತರಿಸಿಕೊಂಡಿದ್ದಾರೆ. ಸುಮಾರು 27.64% ಜನ ಇನ್ನೂ ಅನಾರೋಗ್ಯಪೀಡಿತರಾಗಿದ್ದರೆ ಉಳಿದ 1.98% ಜನ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣದಲ್ಲಿ ನಿಯಮಿತ ಹೆಚ್ಚಳವಾಗುವುದರಲ್ಲಿ ವಿಶೇಷ ಏನಿಲ್ಲ. ಈ ಸೋಂಕು ರೋಗದ ಪ್ರಭಾವ ಅಂತ್ಯವಾಗುವ ವೇಳೆಗೆ ಸಾವಿನ ಪ್ರಮಾಣ 1%ಕ್ಕಿಂತಲೂ ಕಡಿಮೆಯಾಗುವುದರಿಂದ ಚೇತರಿಕೆ ಪ್ರಮಾಣ 99%ಕ್ಕಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಂತವನ್ನು ಯಾವಾಗ ತಲುಪಬಹುದು ಎಂಬುದು ಸೋಂಕಿತರ ಮತ್ತು ಚೇತರಿಸಿಕೊಂಡವರ ಕುರಿತ ದೈನಂದಿನ ಅಂಕಿಅಂಶಗಳಿಂದ ತಿಳಿದು ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

 ದೈನಂದಿನ ಚೇತರಿಕೆ ಪ್ರಮಾಣ ದೈನಂದಿನ ಸೋಂಕಿನ ಪ್ರಮಾಣವನ್ನು ಮೀರಿದರೆ ಮತ್ತು ಈ ಪ್ರಕ್ರಿಯೆ ಕನಿಷ್ಟ ಎರಡು ವಾರ ಮುಂದುವರಿದರೆ, ಅದು ಸೋಂಕು ಹರಡುವಿಕೆ ಪ್ರಮಾಣ ಶೀಘ್ರದಲ್ಲೇ ಇಳಿಮುಖವಾಗುವ ಲಕ್ಷಣವಾಗಿದೆ. ಯಾಕೆಂದರೆ, ಹೀಗಾದರೆ ಪ್ರತೀ ದಿನದ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರಸ್ತುತ ದಿಲ್ಲಿಯಲ್ಲಿ ಮಾತ್ರ ಈ ಹಂತವನ್ನು ತಲುಪಲಾಗಿದೆ. ಆದರೆ ಇಲ್ಲಿಯೂ ಸೋಂಕು ಪ್ರಮಾಣ ನಿರಂತರ ಇಳಿಕೆಯಾಗುತ್ತಿಲ್ಲ. ಜುಲೈ ತಿಂಗಳಲ್ಲಿ ಕೆಲವು ದಿನ ದೈನಂದಿನ ಚೇತರಿಕೆ ಪ್ರಮಾಣವು ಸೋಂಕಿನ ಪ್ರಮಾಣವನ್ನು ಮೀರಿದರೆ, ಕೆಲವು ದಿನ ಸೋಂಕಿನ ಪ್ರಮಾಣ ಹೆಚ್ಚಿದೆ. ದಿಲ್ಲಿಯಲ್ಲಿ ಚೇತರಿಕೆ ಪ್ರಮಾಣ ಸುಮಾರು 90% ಆಗಿದ್ದು, ಇದು ದೇಶದಲ್ಲೇ ಅತ್ಯಧಿಕ ಪ್ರಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News