ಆ.15: ಆರೋಗ್ಯ, ಶಿಕ್ಷಣ, ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐನಿಂದ ‘ಸ್ವಾತಂತ್ರ್ಯ ದಿನದ ಸಂಕಲ್ಪ’

Update: 2020-08-13 06:54 GMT

ಮಂಗಳೂರು, ಆ.13: ಕೊರೋನ ಆತಂಕದ ಮರೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆತುರಾತುರವಾಗಿ ನವ ಉದಾರವಾದಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ದೇಶದ ಸಂವಿಧಾನ ಖಾತರಿಪಡಿಸಿದ ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕು ಜನತೆಯಿಂದ ಕಸಿಯಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ, ಆರೋಗ್ಯದ ವ್ಯಾಪಾರೀಕರಣವನ್ನು, ಉದ್ಯೋಗ ನಷ್ಟವನ್ನು ತಡೆಗಟ್ಟಿ ಯುವಜನರನ್ನು ನಿರೋದ್ಯೋಗದಿಂದ ರಕ್ಷಿಸಬೇಕು ಎಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯೋತ್ಸವವನ್ನು ‘ಸ್ವಾತಂತ್ರ್ಯ ದಿನದ ಸಂಕಲ್ಪ’ವನ್ನಾಗಿ ಆಚರಿಸಲು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನಿರ್ಧರಿಸಿದೆ.

ದೇಶ ಸ್ವತಂತ್ರಗೊಳ್ಳುವ ಸಂದರ್ಭ, ಶಿಕ್ಷಣ, ಉದ್ಯೋಗ, ಆರೋಗ್ಯವನ್ನು ಪ್ರತಿಯೊಬ್ಬ ಪ್ರಜೆಗೂ ಖಾತರಿಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ಸೇವಾ ಕ್ಷೇತ್ರವನ್ನಾಗಿಸಿ ನಾಗರಿಕರ ಮೂಲಭೂತ ಹಕ್ಕಾಗಿ ಪರಿಗಣಿಸಲಾಗಿತ್ತು. ದೇಶದ ಮೂಲೆಮೂಲೆಗಳಲ್ಲೂ ಶಾಲೆ, ಆಸ್ಪತ್ರೆಗಳನ್ನು ಸರಕಾರ ಆದ್ಯತೆಯಿಂದ ತೆರೆಯತೊಡಗಿತ್ತು.‌ ಉದ್ಯೋಗ ಯುವಜನರ ಹಕ್ಕೆಂದು ಪರಿಗಣಿಸಲ್ಪಟ್ಟು ಉದ್ಯೋಗ ದೊರಕುವವರಗೆ ನಿರುದ್ಯೋಗ ಭತ್ತೆ ನೀಡುವ ಬೇಡಿಕೆಗೂ ಬಲಬಂದಿತ್ತು.

ಆದರೆ ತೊಂಬತ್ತರ ದಶಕದಲ್ಲಿ‌ ಆರಂಭಗೊಂಡ ಉದಾರೀಕರಣ, ಖಾಸಗೀಕರಣದ ನೀತಿಗಳು ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನೂ ವ್ಯಾಪಾರೀಕರಣಕ್ಕೆ ತೆರೆದಿಟ್ಟವು. ಅದರ ಪರಿಣಾಮವಾಗಿ ಇಂದು ‘ದುಡ್ಡಿದ್ದವರಿಗಷ್ಟೆ ಆರೋಗ್ಯ, ಶಿಕ್ಷಣ’ ಎಂಬ ನೀತಿ ಅನಧಿಕೃತವಾಗಿ ಜಾರಿಗೆ ಬಂದಿದೆ. ಇದರಿಂದ ಬಹುಸಂಖ್ಯಾತ ಜನ ವಿಭಾಗ ಗುಣಮಟ್ಟದ ಶಿಕ್ಷಣ, ಅರೋಗ್ಯ ಸೇವೆಯಿಂದ ವಂಚಿತಗೊಂಡಿವೆ. ಎಲ್ಲೆಡೆ ಖಾಸಗಿ ಶಾಲೆ, ಆಸ್ಪತ್ರೆಗಳು ತೆರೆದು ಸರಕಾರಿ ಶಾಲೆ, ಆಸ್ಪತ್ರೆಗಳು ಪಾಳು ಬಿದ್ದಿವೆ. ಭದ್ರತೆಯ ಉದ್ಯೋಗವಂತು ನವ ಉದಾರವಾದದ ಈ ಕಾಲಘಟ್ಟದಲ್ಲಿ ಯುವ ಜನರಿಗೆ ಕನಸಾಗಿಯಷ್ಟೆ ಉಳಿದಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟದ ಆಶಯ, ಆಳುವ ಜನಗಳ ಭರವಸೆ ಹುಸಿಗೊಂಡಿದೆ. ಕೊರೋನ ಸಂದರ್ಭವಂತು ಈ ಎಲ್ಲ ರಂಗದ ಹುಳುಕುಗಳನ್ನು ಶಂಕೆಗೆ ಎಡೆಯಿಲ್ಲದಂತೆ ಬಹಿರಂಗಪಡಿಸಿದೆ.

ಈ ಹಿನ್ನಲೆಯಲ್ಲಿ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಆ.15ರ ಸ್ವಾತಂತ್ರ್ಯ ದಿನವನ್ನು ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕನ್ನು ಉಳಿಸುವ, ಸ್ವತಂತ್ರ ಭಾರತ ನೀಡಿದ ವಾಗ್ದಾನವನ್ನು ನೆನಪಿಸುವ ನಿಟ್ಟಿನಲ್ಲಿ‌ ‘ಸ್ವಾತಂತ್ರ್ಯ ದಿನದ ಸಂಕಲ್ಪ’ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಿದೆ ಎಂದು ಡಿವೈಎಫ್ಐ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News