ರಾಜಸ್ಥಾನ: ಗೆಹ್ಲೋಟ್ ಸರಕಾರದ ವಿರುದ್ಧ ನಾಳೆ ಅವಿಶ್ವಾಸ ನಿರ್ಣಯ ಮಂಡಿಸಲಿರುವ ಬಿಜೆಪಿ

Update: 2020-08-13 12:12 GMT

ಜೈಪುರ್: ರಾಜಸ್ಥಾನದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ  ಬಿಜೆಪಿ ಶುಕ್ರವಾರ ಅವಿಶ್ವಾಸ ನಿಲುವಳಿ ಮಂಡಿಸಲು ನಿರ್ಧರಿಸಿದೆ ಎಂದು ವಿಧಾನಸಭೆಯ ವಿಪಕ್ಷ ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಹೇಳಿದ್ದಾರೆ. ಈ ಕುರಿತಾದ ನಿರ್ಧಾರವನ್ನು ಗುರುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ಕೈಗೊಳ್ಳಲಾಗಿದೆ.

“ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ.  ಸರಕಾರವನ್ನು ಉರುಳಿಸಲು ಷಡ್ಯಂತ್ರ ಹೂಡಿದ ಆರೋಪದ ಮೇಲೆ ಬಂಧಿತರಾದವರಿಗೆ ಬಿಜೆಪಿ ಜತೆ ನಂಟು ಇದೆ ಎಂದು  ತೋರಿಸುವ ಯತ್ನ ಮಾಡಲಾಯಿತಾದರೂ ಸರಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ. ಈ ವಿಚಾರಗಳನ್ನು ಅವಿಶ್ವಾಸ ನಿಲುವಳಿಯಲ್ಲಿ ವಿವರಿಸಲಾಗುವುದು'' ಎಂದು ಕಟಾರಿಯಾ ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷದ ಬಿಕ್ಕಟ್ಟು ಶಮನಗೊಂಡಿದೆಯಾದರೂ ಈಗಲೂ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ, ಒಬ್ಬರು ಪೂರ್ವ ದಿಕ್ಕಿನಲ್ಲಿ ಹೋಗುತ್ತಿದ್ದರೆ ಇನ್ನೊಬ್ಬರು ಪಶ್ಚಿಮ ದಿಕ್ಕಿನತ್ತ ಸಾಗುತ್ತಿದ್ದಾರೆ'' ಎಂದು ಅವರು ಹೇಳಿದರು.

ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಸಚಿನ್ ಪೈಲಟ್ ಬಂಡಾಯದ ನಂತರ ರಾಜ್ಯ ಘಟಕದಲ್ಲಿ ಕಾಣಿಸಿಕೊಂಡ  ಬಿಕ್ಕಟ್ಟು ಈಗ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿರುವುದರಿಂದ ಅದೊಂದು `ಮುಗಿದ ಅಧ್ಯಾಯ' ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News