ಉಡುಪಿ ತಾಪಂ ಅಧ್ಯಕ್ಷರಾಗಿ ಸಂಧ್ಯಾ ಕಾಮತ್, ಶರತ್‌ಕುಮಾರ್ ಬೈಲಕೆರೆ ಉಪಾಧ್ಯಕ್ಷರಾಗಿ ಆಯ್ಕೆ

Update: 2020-08-13 13:45 GMT

ಉಡುಪಿ, ಆ.13: ಉಡುಪಿ ತಾಲೂಕು ಪಂಚಾಯತ್‌ನ ಅಧ್ಯಕ್ಷರಾಗಿ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ಶರತ್‌ಕುಮಾರ್ ಬೈಲಕೆರೆ ಅವರು ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ತಾಪಂನಲ್ಲಿ ಅಂಜಾರು ಕ್ಷೇತ್ರವನ್ನು ಪ್ರತಿನಿಧಿಸುವ ಸಂಧ್ಯಾ ಕಾಮತ್ ಪಕ್ಷದ ಆಯ್ಕೆಯಾಗಿ ಅವಿರೋಧವಾಗಿ ಚುನಾಯಿತರಾದರೆ, ಈವರೆಗೆ ಉಡುಪಿ ತಾಪಂನಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ತೆಂಕನಿಡಿಯೂರು ಕ್ಷೇತ್ರವನ್ನು ಪ್ರತಿನಿಧಿಸುವ ಶರತ್‌ಕುಮಾರ್ ಬೈಲಕೆರೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಹ್ಮಾವರ ಮತ್ತು ಕಾಪುನಲ್ಲಿ ತಾಲೂಕು ಪಂಚಾಯತ್‌ಗಳು ಹೊಸದಾಗಿ ರಚನೆಯಾದ ಬಳಿಕ 41 ಸದಸ್ಯರ ಉಡುಪಿ ತಾಪಂ ಹಂಚಿಹೋಗಿದ್ದು, ಅದರ ಬಲ ಈಗ 13ಕ್ಕಿಳಿದಿದೆ. ಇದರಲ್ಲಿ ಬಿಜೆಪಿ 9 ಸದಸ್ಯರೊಂದಿಗೆ ಬಹುಮತವನ್ನು ಹೊಂದಿದ್ದರೆ, ಕಾಂಗ್ರೆಸ್ ಕೇವಲ ನಾಲ್ವರು ಸದಸ್ಯರನ್ನು ಮಾತ್ರ ಹೊಂದಿದೆ.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಇವರು ಚುನಾವಣಾಧಿಕಾರಿ ಯಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಉಡುಪಿ ತಾಪಂನ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ್ ಹಾಗೂ ಅವಿಭಜಿತ ಉಡುಪಿ, ಕಾಪು ಮತ್ತು ಬ್ರಹ್ಮಾವರ ತಾಲೂಕು ಪಂಚಾಯತ್‌ಗಳ ಸದಸ್ಯರು ಉಪಸ್ಥಿತರಿದ್ದರು.

ಕಾಪು ಮತ್ತು ಬ್ರಹ್ಮಾವರ ತಾಪಂಗಳಿಗೂ ಈಗಾಗಲೇ ಪ್ರತ್ಯೇಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿವೆ. ಈ ಎಲ್ಲಾ ತಾಪಂಗಳ ಅಧಿಕಾರಾವಧಿ ಇನ್ನು ಕೇವಲ ಎಂಟು ತಿಂಗಳು ಮಾತ್ರ ಉಳಿದಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News