×
Ad

ಉಡುಪಿ ; ಅಕ್ಷರ ದಾಸೋಹ ನೌಕರರಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ

Update: 2020-08-13 19:33 IST

ಉಡುಪಿ, ಆ.13: ರಾಜ್ಯಾದ್ಯಂತ ನಡೆದಿರುವ ಅನಿರ್ದಿಷ್ಟ ಹೋರಾಟದ ಅಂಗವಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ (ಸಿಐಟಿಯು)ದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ 1,17,999 ಮಂದಿ ನೌಕರರು ಕಳೆದ 19 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಆದಾಯವಿಲ್ಲದೇ ಇವರೆಲ್ಲ ಅತ್ಯಂತ ನಿಕೃಷ್ಟ ಸ್ಥಿತಿ ತಲುಪಿದ್ದಾರೆ. ಈ ನೌಕರರಲ್ಲಿ ಬಡ ಮಹಿಳೆಯರು, ವಿಧವೆಯರು ಹಾಗೂ ವಿಚ್ಛೇಧಿತರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಪ್ರತಿಭಟಕಾರರು ನುಡಿದರು.

ಬೇಡಿಕೆಗಳು: ಬಿಸಿಯೂಟ ನೌಕರರಿಗೆ ಎಪ್ರಿಲ್ ತಿಂಗಳಿನಿಂದ ಶಾಲೆ ಪ್ರಾರಂಭ ಗೊಳ್ಳುವವರೆಗಿನ ವೇತನ ಪಾವತಿಸಬೇಕು. ಬಿಸಿಯೂಟ ನೌಕರರನ್ನು ಖಾಯಂ ಗೊಳಿಸಿ, ಶಾಸನಾತ್ಮಕ ಸವಲತ್ತುಗಳನ್ನು ನೀಡಬೇಕು. ಇವರೆಲ್ಲರಿಗೂ ಕನಿಷ್ಠ ಆರು ತಿಂಗಳವರೆಗೆ ಪಡಿತರ ಒದಗಿಸ ಬೇಕು. ಬಿಲಿಯೂಟ ನೌಕರರಿಗೆ ಲಾಕ್‌ಡೌನ್ ಅವಧಿಯಲ್ಲಿ 7500ರೂ.ನಂತೆ ಮುಂದಿನ ಆರು ತಿಂಗಳು ನೀಡಬೇಕು. ಕುಟುಂಬದ ಚಿಕಿತ್ಸೆಯ ವೆಚ್ಚವನ್ನು ಸರಕಾರ ಭರಿಸಬೇಕು.

ಪ್ರತಿಭಟನೆಯ ಕೊನೆಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ ಇವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ಸುನಂದ, ಕಾರ್ಯದರ್ಶಿ ಕಮಲ, ಖಜಾಂಚಿ ಗಿರಿಜ, ಮುಖಂಡರಾದ ಬೇಬಿ ಭಂಡಾರಿ, ಮಾಲತಿ ನಾಯಕ್, ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪಿ ವಿಶ್ವನಾಥ್ ರೈ, ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಎಸ್. ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News