ಅಶೋಕ್ ಗೆಹ್ಲೋಟ್‌ಗೆ ಬಲ ನೀಡಿದ ಸುಪ್ರೀಂ ಕೋರ್ಟ್ ಆದೇಶ

Update: 2020-08-13 16:47 GMT

ಹೊಸದಿಲ್ಲಿ, ಆ. 13: ಕಾಂಗ್ರೆಸ್‌ಗೆ ಸೇರಿರುವ ಆರು ಬಿಎಸ್ಪಿ ಶಾಸಕರ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ನಾಳೆ ನಡೆಯಲಿರುವ ವಿಶ್ವಾಸ ಮಂಡನೆಯ ವೇಳೆ ಕಾಂಗ್ರೆಸ್ ಸರಕಾರಕ್ಕೆ ವರದಾನವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರದ ವಿಶ್ವಾಸಮತದಲ್ಲಿ ಕಾಂಗ್ರೆಸ್‌ಗೆ ಸೇರಿದ ಬಿಎಸ್ಪಿಯ 6 ಶಾಸಕರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವ 6 ಶಾಸಕರ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ, ಶಾಸಕರ ಮೇಲೆ ನಿಷೇಧ ಹೇರಲು ನಿರಾಕರಿಸಿದೆ. ಈ ಪ್ರಕರಣದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರಾಜಸ್ಥಾನದ ಏಕ ಸದಸ್ಯ ಪೀಠಕ್ಕೆ ಬಿಟ್ಟಿದೆ.

ವಿಧಾನ ಸಭೆ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಮನವಿಯಲ್ಲಿ ಕೋರಲಾಗಿತ್ತು. ಆದರೆ, ವಿಚಾರಣೆ ವೇಳೆ ತ್ರಿಸದಸ್ಯರ ಪೀಠ, ‘‘ಈ ಪ್ರಕರಣದ ವಿಚಾರಣೆ ಈಗಾಗಲೇ ರಾಜಸ್ಥಾನ ಹೈಕೋರ್ಟ್‌ನಲ್ಲಿ ನಡೆಯುತ್ತಿರುವುದರಿಂದ ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಲಾರೆವು’’ ಎಂದು ಹೇಳಿತ್ತು.

ಈ ಮಧ್ಯಂತರ ಆದೇಶದಿಂದಾಗಿ, ನಾಳೆ ನಡೆಯಲಿರುವ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಿಎಸ್ಪಿಯ ಮಾಜಿ ಶಾಸಕರಿಗೆ ಅವಕಾಶ ಒದಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News