ಉಡುಪಿ: ಬಸ್ ಮಾಲಕರ ಸಂಘದಿಂದ ಹೊಸ ಬಸ್ ಪಾಸ್ ಯೋಜನೆ

Update: 2020-08-13 15:17 GMT

ಉಡುಪಿ, ಆ.13: ಉಡುಪಿ ಬಸ್ ಮಾಲಕರ ಸಂಘ ಹಾಗೂ ಚಲೋ ಆ್ಯಪ್ ಉಡುಪಿಯಲ್ಲಿ ಚಲೋ ಸೂಪರ್ ಸೇವರ್ ಪ್ಲಾನ್ಸ್ ಎಂಬ ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ಯೋಜನೆಯನ್ನು ಆರಂಭಿಸಿದೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಗುರುವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಪ್ರಯಾಣಿಕರಿಗೆ ಪ್ರತೀ ಟ್ರಿಪ್‌ಗೆ ಸರಾಸರಿ 4.99 ರೂ. ದರದಲ್ಲಿ ಪ್ರಯಾಣಿಬಹುದಾಗಿದೆ ಎಂದರು.

ಸಾಮಾನ್ಯವಾಗಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಆ ಒಂದು ಟ್ರಿಪ್‌ಗೆ ಮಾತ್ರ ಬಸ್ ಟಿಕೇಟ್ ನೀಡಲಾಗುತ್ತದೆ. ಆದರೆ ಹೊಸ ಪಾಸ್ ಯೋಜನೆಯಂತೆ ಪ್ರಯಾಣಿಕರು 7 ದಿನ ಅಥವಾ 28 ದಿನಗಳ ಕಾರ್ಡ್ ಪಡೆದುಕೊಳ್ಳಬಹುದು. ಪ್ರಯಾಣಿಕರು ತಮ್ಮ ಪ್ರಯಾಣ ದೂರವನ್ನು ಆಧರಿಸಿಯೂ ತಮಗೆ ಅನುಕೂಲಕರವಾದ ಕಾರ್ಡ್ ಪಡೆಯಬಹುದು ಎಂದವರು ಹೇಳಿದರು.

ದೈನಂದಿನ ಪ್ರಯಾಣಿಕರು, ಒಂದು ಟ್ರಿಪ್‌ಗೆ 10 ರೂ.ಪಾವತಿ ಮಾಡುವ ಪ್ರಯಾಣಿಕರು ‘ಸೂಪರ್ ಸೇವರ್’ 499 ಯೋಜನೆಯ ಕಾರ್ಡ್ ಖರೀದಿಸ ಬಹುದು. ಈ ಕಾರ್ಡ್‌ನೊಂದಿಗೆ ಅವರು 28 ದಿನಗಳಲ್ಲಿ 100 ಟ್ರಿಪ್ ಪ್ರಯಾಣಿಸಲು ಅರ್ಹರಾಗಿರುತ್ತಾರೆ. ಪರಿಣಾಮ ಅವರು ಪ್ರತಿ ಸಲದ ಪ್ರಯಾಣಕ್ಕೆ ಕೇವಲ 4.99 ರೂ.ನೀಡಿದಂತಾಗುತ್ತದೆ ಎಂದರು.

ಪ್ರಯಾಣಿಕರ ಏಕಮುಖ ಟಿಕೇಟಿನ ದರಪಟ್ಟಿ ಮತ್ತು ಪ್ರಯಾಣದ ದಿನಗಳ ಆಧಾರದ ಮೇಲೆ ಯೋಜನೆಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸ ಮಾಡಲಾಗಿದ್ದು, ಟ್ರಿಪ್ ಸಂಖ್ಯೆಯನ್ನು ಕೂಡ ಸೂಕ್ತವಾಗಿ ನಿರ್ಧರಿಸಲಾಗಿದೆ ಎಂದವರು ವಿವರಿಸಿದರು.

ಚಲೋ ಸೂಪರ್ ಸೇವರ್ ಯೋಜನೆ ಕಾರ್ಡ್‌ಗಳನ್ನು ಉಡುಪಿಯ ಯಾವುದೇ ಸಿಟಿ ಬಸ್‌ನಲ್ಲಿ ಅಥವಾ ಯಾವುದೇ ಚಲೋ ಸೀಸನ್ ಟಿಕೆಟ್ ಕೌಂಟರ್‌ನಲ್ಲಿ ಖರೀದಿಸಿ ಪ್ರಯಾಣಿಕರು ಉಪಯೋಗಿಸಬಹುದು ಎಂದರು.

ಚಲೋ ಸೂಪರ್ ಸೇವರ್ ಯೋಜನೆಯ ಕಾರ್ಡ್ ಖರೀದಿಸಿದ ಪ್ರಯಾಣಿಕರು ಸಿಟಿ ಬಸ್‌ನಲ್ಲಿ ಪ್ರಯಾಣಿಸುವಾಗ ತಮ್ಮ ಚಲೋ ಕಾರ್ಡ್ ಅನ್ನು ಬಸ್ ಕಂಡಕ್ಟರ್‌ನ ಎಲೆಕ್ಟ್ರಾನಿಕ್ ಟಿಕೆಟ್ ನೀಡುವ ಯಂತ್ರ(ಇಟಿಐಎಂ)ಕ್ಕೆ ತೋರಿಸಬೇಕು. ಆಗ ಇಟಿಐಎಂ, ಸೂಪರ್ ಸೇವರ್ ಯೋಜನೆ ಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ ದಾಖಲಿಸಿಕೊಳ್ಳುತ್ತದೆ. ಇದರಿಂದ ಬಸ್‌ನಲ್ಲಿ ಚಿಲ್ಲರೆ ಹಣ ವಿನಿಮಯ ಮಾಡಿಕೊಳ್ಳುವ ಸಮಸ್ಯೆ ಇರುವುದಿಲ್ಲ. ಕೋವಿಡ್-19 ಸಂದರ್ಭದಲ್ಲಿ ಇದೊಂದು ಸುರಕ್ಷಿತ ಕ್ರಮವಾಗಿದೆ ಎಂದವರು ತಿಳಿಸಿದರು.

ಸಂಘದ ಉಪಾಧ್ಯಕ್ಷ ಗಣನಾಥ ಹೆಗ್ಡೆ, ಕಾರ್ಯದರ್ಶಿ ಸಂದೀಪ್, ಸದಸ್ಯ ವಾದಿರಾಜ್ ಸುವರ್ಣ, ಚಲೋ ಕಾರ್ಡ್‌ನ ಮಂಜುನಾಥ್ ಕೊಪ್ಪಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News