ಆನ್‌ಲೈನ್‌ನಿಂದಾಗಿ ಪುಸಕ್ತ ಓದುಗರಿಗೆ ಅನುಕೂಲ: ಉಡುಪಿ ಜಿಲ್ಲಾಧಿಕಾರಿ

Update: 2020-08-13 15:22 GMT

ಉಡುಪಿ, ಆ.13: ಕೋವಿಡ್-19ನಿಂದ ಸಾರ್ವಜನಿಕರಿಗೆ ಗ್ರಂಥಾಲಯದ ಉಪಯೋಗ ಪಡೆಯಲು ಅನಾನುಕೂಲವಾಗಿದ್ದರೂ ಕೂಡಾ, ಗ್ರಂಥಾಲಯ ಇಲಾಖೆ ಆನ್‌ಲೈನ್ ಮೂಲಕ ಸಾರ್ವಜನಿಕ ಓದುಗರಿಗೆ ಪುಸ್ತಕ ಓದಲು ಅನುವು ಮಾಡಿಕೊಟ್ಟಿರುವುದು ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಬುಧವಾರ ಗೂಗಲ್ ಮೀಟ್ ಮೂಲಕ ನಡೆದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಡಾ.ಎಸ್. ಆರ್. ರಂಗನಾಥನ್ ಭಾವಚಿತ್ರಕ್ಕೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ ಪುಷ್ಪಾರ್ಚನೆ ಮತ್ತು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶೀಘ್ರವೇ ಗ್ರಂಥಾಲಯದಲ್ಲಿ ಸಾರ್ವಜನಿಕ ಓದುಗರಿಗೆ ಓದಲು ಅನುಕೂಲ ವಾಗುವ ಸಲುವಾಗಿ ಕೋವಿಡ್-19 ಮಾರ್ಗಸೂಚಿಯನ್ವಯ ಗ್ರಂಥಾಲಯ ವನ್ನು ಸ್ಯಾನಟೈಸ್ ಮಾಡಿ, ಪ್ರತಿಯೊಂದು ಓದುಗರ ದೇಹದ ಉಷ್ಣಾಂಶ ಪರೀಕ್ಷಿಸಿ ಗ್ರಂಥಾಲಯ ಸೇವೆಯನ್ನು ನೀಡಲು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಎಸ್.ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಫೆಬ್ರವರಿ ತಿಂಗಳಲ್ಲಿ ಸಚಿವ ಸುರೇಶ್‌ಕುಮಾರ್ ಅವರು ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಪೋರ್ಟಲ್‌ನ್ನು ಉದ್ಘಾಟಿ ಸಿದ್ದು, ಇದುವರೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಅದರ ಸದಸ್ಯರಾಗಿ ನೋಂದಾಯಿಸಿ ಕೊಂಡಿ ದ್ದಾರೆ. ಹಾಗೂ ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಆ ಪೋರ್ಟಲ್ ಬಳಸಿ ಪುಸ್ತಕಗಳನ್ನು ಓದುತ್ತಿದ್ದಾರೆ. ಅಲ್ಲದೆ, ಮೊಬೈಲ್ ಆಪ್ ಮೂಲಕ ಕೂಡಾ ಈ ಪೋರ್ಟಲನ್ನು ಬಳಸಬಹುದು ಎಂದು ತಿಳಿಸಿದರು.

ಮಾಹೆಯ ಡೆಪ್ಯೂಟಿ ಚೀಫ್ ಲೈಬ್ರೇರಿಯನ್, ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಕೋವಿಡ್-19 ಇರುವುದರಿಂದ ಮನೆಯಲ್ಲೇ ಕುಳಿತು ಡಿಜಿಟಲ್ ಗ್ರಂಥಾಲಯಗಳ ಉಪಯೋಗವನ್ನು ಪಡೆಯಲು ಅವಕಾಶ ಲಭ್ಯರುವುದರಿಂದ ಆದಷ್ಟು ಸಾರ್ವಜನಿಕರು ಇ-ಮ್ಯಾಗಜೀನ್, ಇ-ಪುಸ್ತಕಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕೋವಿಡ್-19 ಮುಂಜಾಗ್ರತೆ ಕುರಿತು ಬೈಂದೂರು ಕಂಬದಕೋಣೆಯ ಪ್ರೇರಣಾ ಹೆಲ್ತ್‌ಕೇರ್‌ನ ಡಾ.ಸುಬ್ರಹ್ಮಣ್ಯ ಭಟ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ರಂಥಾಲಯ ಅಧಿಕಾರಿ ನಳಿನಿ ಜಿ.ಐ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News