ಕೇಂದ್ರದ ಕರಡು ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಗೆ 17 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆಗಳು

Update: 2020-08-13 15:34 GMT

ಹೊಸದಿಲ್ಲಿ: ಕೇಂದ್ರ ಸರಕಾರ ಸಿದ್ಧಪಡಿಸಿರುವ ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ (ಇಐಎ) 2020 ಕರಡು ಅಧಿಸೂಚನೆಗೆ 17 ಲಕ್ಷಕ್ಕೂ ಅಧಿಕ ಇಮೇಲ್ ಹಾಗೂ ಪತ್ರಗಳ ಮೂಲಕ ಪ್ರತಿಕ್ರಿಯೆಗಳು ಬಂದಿವೆ.

ಈ ಕರಡು ಅಧಿಸೂಚನೆಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿ ಸಾರ್ವಜನಿಕರ ಪ್ರತಿಕ್ರಿಯೆ ಕೇಳಿತ್ತು. ಈ ಕರಡು ಅಧಿಸೂಚನೆಗೆ ಅನುಮೋದನೆ ದೊರೆತ ನಂತರ ಅದು ಈಗ ಅಸ್ತಿತ್ವದಲ್ಲಿರುವ ಇಐಎ ಅಧಿಸೂಚನೆ 2006ರ ಬದಲು ಜಾರಿಗೆ ಬರಲಿದೆ.

ಕೇಂದ್ರ ಇದೀಗ ಪಡೆದಿರುವ 17 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆಗಳಲ್ಲಿ ಕೆಲವು ಒಂದೇ ರೀತಿಯ ಪ್ರತಿಕ್ರಿಯೆಗಳಾಗಿವೆ.  ಈ ಎಲ್ಲಾ ಪ್ರತಿಕ್ರಿಯೆಗಳನ್ನು ಕ್ರೋಢೀಕರಿಸಿ ಅವುಗಳನ್ನು ಪರಾಮರ್ಶಿಸಿ ಅಂತಿಮ ಕರಡು ಸಿದ್ಧಪಡಿಸುವಂತೆ ಕೇಂದ್ರ ಸಚಿವಾಲಯವು  ಸಿಎಸ್‍ಐಆರ್‍ ನ ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್‍ ಸ್ಟಿಟ್ಯೂಟ್‍ ಗೆ ಹೇಳಿದೆ.

ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಹಾಗೂ ಶೀಘ್ರವಾಗುವ ನಿಟ್ಟಿನಲ್ಲಿ ಈ ಕುರಿತಾದ ನಿಯಮಗಳನ್ನು ಸರಕಾರ ಬದಲಾಯಿಸಿದೆ ಎಂದು ಕರಡು ಪ್ರತಿಯಲ್ಲಿ ಹೇಳಲಾಗಿದೆ.

ಆದರೆ ಈ ಕರಡು ಅಧಿಸೂಚನೆ ಪರಿಸರ ಹೋರಾಟಗಾರರು ಹಾಗೂ ರಾಹುಲ್ ಗಾಂಧಿ ಸಹಿತ ವಿಪಕ್ಷ ನಾಯಕರುಗಳಿಂದ ಭಾರೀ ಟೀಕೆಗೊಳಗಾಗಿದ್ದು ಅದನ್ನು ವಾಪಸ್ ಪಡೆಯಬೇಕೆಂಬ ಆಗ್ರಹವೂ ಕೇಳಿ ಬಂದಿದೆ.

ಕೆಲವೊಂದು ಯೋಜನೆ ಜಾರಿಯಲ್ಲಿ ಪರಿಸರ ಸಂಬಂಧಿತ ನಿಯಮಗಳ ಉಲ್ಲಂಘನೆಯಾಗಿದ್ದರೂ ಕೆಲವೊಂದು ಷರತ್ತುಗಳನ್ನು ಪೂರೈಸಿದಲ್ಲಿ ಈ ಯೋಜನೆಗಳಿಗೆ ಅನುಮತಿ ನೀಡುವ ಕುರಿತಂತೆ ಈ ಕರಡು ಅಧಿಸೂಚನೆಯಲ್ಲಿ ಹೇಳಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಕೆಲವೊಂದು ವಿಭಾಗಗಳ ಅಭಿವೃದ್ಧಿ ಯೋಜನೆಗಳಿಗೆ ಪರಿಸರ ಮೇಲಿನ ಪರಿಣಾಮಗಳ  ವಿಶ್ಲೇಷಣೆ  ಹಾಗೂ ಸಾರ್ವಜನಿಕರ ಅಹವಾಲು ಆಲಿಸುವುದು ಅಗತ್ಯವಿಲ್ಲವೆಂದೂ  ಕರಡುಪ್ರತಿಯಲ್ಲಿ ಹೇಳಲಾಗಿರುವುದಕ್ಕೆ ಹಲವರು ವಿರೋಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News