ಕೊರೋನ ಕಾಲದ ಮದುವೆಯನ್ನು ಸುಂದರವಾಗಿಸಿದ 15 ವರ್ಷದ ಬಾಲಕಿಯ ಡಿಜಿಟಲ್ ಕಲ್ಪನೆ

Update: 2020-08-13 17:27 GMT

ಕೊರೋನ ಸಂದರ್ಭ ಎಲ್ಲೆಡೆ ಸುರಕ್ಷಿತ ಅಂತರದ ಜಾಗೃತಿ. ಮದುವೆಯಲ್ಲೂ 50ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವಂತಿಲ್ಲ. ಕುಟುಂಬಿಕರ ಸಂಭ್ರಮಕ್ಕೆ ಬ್ರೇಕ್. ರಾಜ್ಯದ ಗಡಿ ದಾಟಿ ಬರುವುದಕ್ಕೂ ನಿರ್ಬಂಧ. ಇಂತಹ ಸನ್ನಿವೇಶದಲ್ಲಿ ವಿಶಿಷ್ಟ ಡಿಜಿಟಲ್ ಮದುವೆಯೊಂದು ಮಂಗಳೂರು ಸಮೀಪದ ಕೊಣಾಜೆ ಪಟ್ಟೋರಿಯ 'ಕೊಣಾಜೆಕಾರ್ಸ್' ಮನೆಯಲ್ಲಿ ಆಗಸ್ಟ್ 13ರಂದು ನಡೆಯಿತು.

ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ 'ಮುಗುಳಿ ಫ್ಯಾಮಿಲಿ' ಊರಿಗೆ ಚಿರಪರಿಚಿತ ಕುಟುಂಬ. ಅಹಮದ್ ಅಲಿ ಕಂಬಾರ್ ಈ ಕುಟುಂಬದ ಹಿರಿಯ ವ್ಯಕ್ತಿ. ಅವರನ್ನು ಮುಗುಳಿ ಹಮೀದ್ ಅಂತ ಊರವರು ಕರೆಯುತ್ತಾರೆ. ಅವರ 8 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರ ಸೇರಿ 218 ಸದಸ್ಯರು ಕುಟುಂಬದಲ್ಲಿದ್ದಾರೆ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಬಾವಂದಿರು, ಅತ್ತಿಗೆ… ಹೀಗೆ 4 ತಲೆಮಾರು ಮುಗುಳಿ ಕುಟುಂಬದ್ದು. ಮುಗುಳಿ ಹಮೀದ್ ರವರ ಸಹೋದರಿಯ ಮಗಳ ಮಗಳು ಆರ್ಕಿಟೆಕ್ಟ್ ಎಂಜಿನಿಯರ್ ಆಗಿರುವ ನಫೀಸತ್ ನಹಾನ ಅವರ ಮದುವೆಯು ಚಿಕ್ಕಮಗಳೂರು ಉದ್ಯಮಿ ಇಸ್ಮಾಯಿಲ್ ರಾಖಿಬ್ ಜೊತೆಗೆ ಆಗಸ್ಟ್ 13 ರಂದು ಕೊಣಾಜೆಯ ಪಟ್ಟೋರಿಯಲ್ಲಿ ಅತ್ಯಂತ ಸರಳವಾಗಿ ಸರಕಾರದ ನಿಯಮಗಳ ಪ್ರಕಾರ 50 ಸದಸ್ಯರೊಳಗೆ ನೆರವೇರಿತು.

ಆದರೆ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗದ ಮುಗುಳಿ ಕುಟುಂಬದ ಬಹುತೇಕ ಸದಸ್ಯರು ಬೇಸರದಲ್ಲಿದ್ದರು. ಈ 15ರ ಹರೆಯದ ಝೋಯಾ ಮುಗುಳಿ ಕುಟುಂಬದ 218 ಸದಸ್ಯರನ್ನು ಸೇರಿಸಿ 28 ನಿಮಿಷದ ಒಂದು ವಿಶೇಷ ವೀಡಿಯೋವನ್ನು ತಯಾರಿಸಿದ್ದಾರೆ. ಮುಗುಳಿ ಕುಟುಂಬದ ಹೆಚ್ಚಿನ ಸದಸ್ಯರು ಕಾಸರಗೋಡು ಭಾಗದಲ್ಲಿದ್ದು, ಅವರಿಗೂ ಭಾಗವಹಿಸಲಾಗುತ್ತಿಲ್ಲ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಜರ್ಮನಿ, ನ್ಯೂಝಿಲ್ಯಾಂಡ್ ನಲ್ಲಿ ಕೂಡಾ ಕುಟುಂಬಿಕರಿದ್ದಾರೆ.

ಮುಂಬೈಯ ಕಲ್ಯಾಣ್ ನಲ್ಲಿರುವ ಕುಟುಂಬ ಸದಸ್ಯೆ ಡಾ. ಜಮೀಲಾ ಹಾಗೂ ಡಾ. ಮುಹಮ್ಮದ್ ದಂಪತಿ ಪುತ್ರಿ, ಕಲ್ಯಾಣ್ ಬಿ.ಕೆ.ಬಿರ್ಲಾ ಪಬ್ಲಿಕ್ ಸ್ಕೂಲ್ ನ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಝೋಯಾ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನು ಸಂಪರ್ಕಿಸಿ, ಅವರ ಶುಭಾಷಯದ ವೀಡಿಯೋಗಳನ್ನು ಸಂಗ್ರಹಿಸಿ 'ನನ್ನೂ ಕೀ ಶಾದಿ' ಎಂಬ ಕ್ಲಿಪ್ ತಯಾರಿಸಿದ್ದಾರೆ. ಒಬ್ಬೊಬ್ಬ ಸದಸ್ಯರೂ ವಿವಿಧ ರೀತಿಯ ವೀಡಿಯೋಗಳನ್ನು ಮಾಡಿದ್ದಾರೆ. ಇದನ್ನು ಮದುವೆ ದಿನ ಡಿಜಿಟಲ್ ಸ್ಕ್ರೀನ್ ನಲ್ಲಿ ಮದುವೆ ಮನೆಯಲ್ಲಿ ಪ್ರಸಾರ ಮಾಡಲಾಯಿತು. ಮದುವೆ ಕಾರ್ಯಕ್ರಮ ಮುಗಿದು ಸಂಜೆ ವೇಳೆ ಝೂಮ್ ಮೀಟಿಂಗ್ ನಡೆಸಿ ಪರಸ್ಪರ ಶುಭಾಶಯ, ಹರಟೆ, ಮಾತುಕತೆಯೊಂದಿಗೆ ಸಂತೋಷ ವಿನಿಮಯ ಮಾಡಿಕೊಂಡಿದ್ದಾರೆ. 28 ನಿಮಿಷಗಳ ವೀಡಿಯೋದಲ್ಲಿ ಮದುಮಗ, ಮದುಮಗಳಿಗೆ ಶುಭಾಶಯ, ಕುರ್ ಆನ್ ಪಾರಾಯಣ, ಪ್ರಾರ್ಥನೆ, ಹಿರಿಯರ ಮತ್ತು ಕಿರಿಯರ  ಶುಭ ಹಾರೈಕೆ, ಮದುವೆಗೆ ಅಲಂಕರಿಸಿ ಹೊರಡುವ ಸನ್ನಿವೇಶದ ಜೊತೆಗೆ ಕುಟುಂಬದ ಮಕ್ಕಳ ನೃತ್ಯ, ಹಾಡು ಮೊದಲಾದ ಮನರಂಜನೆಯೂ ಇದೆ.

ಝೋಯಾ ಕಲ್ಪನೆಯ ಈ ವಿಶೇಷ ಡಿಜಿಟಲ್ ಮದುವೆಗೆ ತಾಯಿ ದಂತವೈದ್ಯೆ ಜಮೀಲಾ ಸಹಕಾರ ನೀಡಿದ್ದಾರೆ. ಕುಟುಂಬ ಸದಸ್ಯರಾದ ಎಂಜಿನಿಯರ್ ಸವಾದ್ ಮೊಗ್ರಾಲ್, ಡಾ. ಇಜಾಝ್ ಜಮಾಲ್ ಕಾಸರಗೋಡು ತಾಂತ್ರಿಕ ಸಹಕಾರ ನೀಡಿದ್ದಾರೆ.

Full View

Writer - -ರಶೀದ್ ವಿಟ್ಲ

contributor

Editor - -ರಶೀದ್ ವಿಟ್ಲ

contributor

Similar News