ಕರ್ನಾಟಕ-ಕೇರಳ ಗಡಿ ಸಂಚಾರಕ್ಕೆ ಮುಕ್ತಗೊಳಿಸಲು ಆಗ್ರಹಿಸಿ ಮನವಿ

Update: 2020-08-13 17:27 GMT

ಮಂಗಳೂರು, ಆ.13: ಕೇರಳದ ಕಾಸರಗೋಡು ಜಿಲ್ಲೆಯಿಂದ ದಿನಂಪ್ರತಿ ಸಾವಿರಾರು ಮಂದಿ ಕರ್ನಾಟಕದ ಮಂಗಳೂರು ಮತ್ತಿತರ ಕಡೆ ಕೆಲಸಕ್ಕೆ ಆಗಮಿಸುತ್ತಿದ್ದಾರೆ. ಅದರಂತೆ ಕರ್ನಾಟಕದ ವಿವಿಧ ಕಡೆಯಿಂದಲೂ ಕಾಸರಗೋಡು, ಮಂಜೇಶ್ವರ ಮತ್ತಿತರ ಕಡೆ ತೆರಳುತ್ತಿದ್ದಾರೆ. ಅಲ್ಲದೆ ಕೇರಳದಿಂದ ಲಕ್ಷಾಂತರ ವಿದ್ಯಾರ್ಥಿಗಳು ಕರ್ನಾಟಕದ ವಿವಿಧ ವಿದ್ಯಾ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇರಳದಿಂದ ಅಸೌಖ್ಯದಿಂದ ಬಳಲುತ್ತಿರುವ ರೋಗಿಗಳಿಗೆ ದ.ಕ.ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಗಡಿಪ್ರದೇಶದಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಿರುವುದರಿಂದ ಈ ಎಲ್ಲಾ ವರ್ಗದ ಜನರುಗೆ ಸಮಸ್ಯೆಯಾಗಿದೆ. ಮುಖ್ಯವಾಗಿ ಬೀಡಿ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಹಾಗಾಗಿ ಈ ಗಡಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್‌ ಯೂನಿಯನ್ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಸಲ್ಲಿಸಿದೆ.

ಕೇರಳದಲ್ಲಿ ಲಕ್ಷಾಂತರ ಮಂದಿ ಬೀಡಿ ಕಟ್ಟುವುದನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹೆಚ್ಚಿನ ಬಹು ಮಹಡಿ ಕಟ್ಟಡಗಳು ಕೇರಳದವರಿಗೆ ಸೇರಿದೆ. ಸಾಕಷ್ಟು ಸಂಖ್ಯೆಯ ಉದ್ಯಮಿಗಳೂ ಇದ್ದಾರೆ. ತಲಪಾಡಿ ಗಡಿ ಬಂದ್‌ನಿಂದ ಉಭಯ ಜಿಲ್ಲೆ-ರಾಜ್ಯಗಳ ಜನರ ಸಂಪರ್ಕಕ್ಕೆ ತೊಡಕಾಗಿದೆ. ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದುಡಿಯುವ ವರ್ಗ, ಬೀಡಿ ಕಾರ್ಮಿಕರು ಗುತ್ತಿಗೆದಾರರು, ದಿನಗೂಲಿಗಳು, ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಯುವ ಜನಾಂಗ, ಉದ್ಯಮಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಂಟಿ ಸಭೆ ನಡೆಸಿ ಈ ಗಡಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಯೂನಿಯನ್‌ನ ಮುಖಂಡರಾದ ಎಂ. ಸುರೇಶ್ಚಂದ್ರ ಶೆಟ್ಟಿ, ಮಹಮ್ಮದ್ ರಫಿ, ಹರೀಶ್ ಕೆಎಸ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News