'ದೇಶದ್ರೋಹಿಗಳು' ಹೇಳಿಕೆ ವಿರುದ್ಧ ಬಿಎಸ್ಎನ್ಎಲ್ ನೌಕರರಿಂದ ಪ್ರತಿಭಟನೆ

Update: 2020-08-13 17:40 GMT

ಕಾರವಾರ, ಆ.13: ಬಿಎಸ್ಎನ್ಎಲ್ ವಿರುದ್ಧ ಸಂಸದ ಆನಂತಕು ಮಾರ್ ಹೆಗಡೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಇಲ್ಲಿನ ಪ್ರಧಾನ ಕಚೇರಿಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳು ಹಾಗೂ ನೌಕರರು ಗುರುವಾರ ಪ್ರತಿಭಟನೆ ನಡೆಸಿರು. ಸಂಸದ ಹೆಗಡೆ ವಿರುದ್ದ ಘೋಷಣೆ ಹಾಕಿದರು.

ಕುಮಟಾದ ಕೂಜಳ್ಳಿಯಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದ ಅನಂತ್ ಕುಮಾರ್ ಹೆಗಡೆ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವರು ದೇಶದ್ರೋಹಿಗಳು ಎನ್ನುವ ಹೇಳಿಕೆ ನೀಡುವ ಮೂಲಕ ಬಿಎಸ್ಎನ್ಎಲ್ ನೌಕರರನ್ನು ನಿಂದಿಸಿದ್ದರು. ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕ್ಷಮೆ ಕೋರದಿದ್ದರೆ ಅವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರದ ಅಧೀನದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಕೆಲಸ ಮಾಡುತ್ತಿದೆ. ತಮ್ಮದೇ ಸರ್ಕಾರದ ವಿರುದ್ಧ ಅನಂತಕುಮಾರ ಹೆಗಡೆ ದೇಶದ್ರೋಹದ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ಗಣ್ಯರು ಬಿಎಸ್ಎನ್ಎಲ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸುತ್ತಿರುವಾಗ ಸಂಸದರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ಅನಂತಕುಮಾರ ಹೆಗಡೆ ಒಮ್ಮೆಯೂ ಜನಪರವಾಗಿ ಸಂಸತ್ ನಲ್ಲಿ ಮಾತನಾಡಿಲ್ಲ. ಬಿಎಸ್ಎನ್ಎಲ್ ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಅವರಲ್ಲಿ ಅಧಿಕಾರ ಇದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಮೂಲಭೂತ ಅಗತ್ಯತೆಗಳನ್ನು ಬಿಎಸ್ ಎನ್ ಎಲ್ ಸಂಸ್ಥೆಗೆ ನೀಡದೇ ಕೆಲಸ ಮಾಡಲು ಸೂಚಿಸುವುದು ಸರಿಯಲ್ಲ ಎಂದು ಹೇಳಿದರು. ಪ್ರಮುಖರಾದ ಪಿ.ಎಸ್ ಭಟ್ಟ, ಎಂ.ಎನ್ ಹೆಗಡೆ ಇತರರು ಪ್ರತಿಭಟನೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News