ಸರಕಾರಕ್ಕೆ 57,000 ಕೋ.ರೂ.ಗೂ ಅಧಿಕ ಲಾಭಾಂಶ ಪಾವತಿಸಲು ಆರ್‌ಬಿಐ ಒಪ್ಪಿಗೆ

Update: 2020-08-14 14:21 GMT

ಹೊಸದಿಲ್ಲಿ,ಆ.14: ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್‌ಬಿಐ ಆಡಳಿತ ಮಂಡಳಿಯ 584ನೇ ಸಭೆಯು ಶುಕ್ರವಾರ ಅಂತ್ಯಗೊಂಡಿದ್ದು,ಸರಕಾರಕ್ಕೆ 57,000 ಕೋ.ರೂ.ಗೂ ಹೆಚ್ಚಿನ ವಾರ್ಷಿಕ ಲಾಭಾಂಶವನ್ನು ಪಾವತಿಸುವ ಪ್ರಸ್ತಾವಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಕೊರೋನ ವೈರಸ್ ಲಾಕ್‌ಡೌನ್ ಸರಕಾರದ ಆದಾಯ ಸಂಗ್ರಹಣೆಯ ಮೇಲೆ ಪರಿಣಾಮವನ್ನು ಬೀರಿದ್ದರಿಂದ ಎಪ್ರಿಲ್-ಜೂನ್ ಅವಧಿಯಲ್ಲಿ ವಿತ್ತೀಯ ಕೊರತೆಯು ದಾಖಲೆಯ 6.62 ಲ.ಕೋ.ರೂಗೆ ಏರಿಕೆಯಾಗಿರುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.

ಪ್ರಚಲಿತ ಆರ್ಥಿಕ ಸ್ಥಿತಿ,ನಿಲ್ಲದ ಜಾಗತಿಕ ಮತ್ತು ದೇಶಿಯ ಸವಾಲುಗಳು ಹಾಗೂ ಕೋವಿಡ್-19 ರ ಆರ್ಥಿಕ ಪರಿಣಾಮವನ್ನು ಶಮನಿಸಲು ಕೈಗೊಳ್ಳಲಾದ ಹಣಕಾಸು,ನಿಯಂತ್ರಣ ಮತ್ತು ಇತರ ಕ್ರಮಗಳನ್ನು ಪುನರ್‌ಪರಿಶೀಲಿಸಿದ ಬಳಿಕ ಆರ್‌ಬಿಐ ಆಡಳಿತ ಮಂಡಳಿಯು 2019-20(ಜುಲೈನಿಂದ ಜೂನ್‌ವರೆಗೆ)ರ ಲೆಕ್ಕಪತ್ರ ವರ್ಷಕ್ಕಾಗಿ ಹೆಚ್ಚುವರಿಯಾಗಿ 57,128 ಕೋ.ರೂ.ಗಳನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸಲು ಒಪ್ಪಿಕೊಂಡಿದೆ. ಆರ್‌ಬಿಐ ಜುಲೈನಿಂದ ಜೂನ್‌ವರೆಗಿನ ಅವಧಿಯನ್ನು ಲೆಕ್ಕಪತ್ರ ವರ್ಷವೆಂದು ಪರಿಗಣಿಸುತ್ತದೆ.

 2020-21ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಆರ್‌ಬಿಐ ಮತ್ತು ಇತರ ಸರಕಾರಿ ಹಣಕಾಸು ಸಂಸ್ಥೆಗಳಿಂದ 60,000 ಕೋ.ರೂ.ಗಳ ಲಾಭಾಂಶವನ್ನು ಅಂದಾಜಿಸಲಾಗಿದೆ.

ಹಣಪಾವತಿಯನ್ನು ಹೆಚ್ಚಿಸುವಂತೆ ಸರಕಾರವು ಇತ್ತೀಚಿನ ವರ್ಷಗಳಲ್ಲಿ ಆರ್‌ಬಿಐ ಮೇಲೆ ಒತ್ತಡ ಹೇರುತ್ತಿದೆ. ಕಳೆದ ವರ್ಷ ಆರ್‌ಬಿಐ ಮಂಡಳಿಯು 1.23 ಲ.ಕೋ.ರೂ.ಗಳ ಲಾಭಾಂಶ ಮತ್ತು 52,640 ಕೋ.ರೂ.ಗಳ ಹೆಚ್ಚುವರಿ ಬಂಡವಳ ಸೇರಿದಂತೆ 1.76 ಲ.ಕೋ.ರೂ.ಗಳ ದಾಖಲೆ ಮೊತ್ತವನ್ನು ಸರಕಾರಕ್ಕೆ ಪಾವತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News