ಚೇರ್ಕಾಡಿ: ಹೊಳೆ ಬಳಿಯ ಗದ್ದೆಯಲ್ಲಿ ಅಕ್ರಮ ಮರಳುಗಾರಿಕೆ

Update: 2020-08-14 16:44 GMT

ಬ್ರಹ್ಮಾವರ, ಆ.14: ಚೇರ್ಕಾಡಿ ಗ್ರಾಮದ ಇಂಬ್ರಗೋಳಿ ಎಂಬಲ್ಲಿರುವ ಮಡಿಸಾಲ್ ಹೊಳೆ ಬದಿಯ ಗದ್ದೆಯಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳು ಗಾರಿಕೆಗೆ ಆ.13ರಂದು ರಾತ್ರಿ 11:30ರ ಸುಮಾರಿಗೆ ದಾಳಿ ನಡೆಸಿದ ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ, ಹಲವು ವಾಹನ ಗಳನ್ನು ವಶಪಡಿಸಿಕೊಂಡಿದೆ.

ಹೊಳೆಯ ಸಮೀಪದ ಕೆಸರಿನೊಂದಿಗೆ ಮರಳು ತುಂಬಿದ ಗದ್ದೆಯಲ್ಲಿ ಅಕ್ರಮ ವಾಗಿ ಹಿಟಾಚಿ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿತ್ತು. ಕೆಸರಿನಲ್ಲಿರುವ ಮರಳನ್ನು ಸಂಸ್ಕರಣಗೊಳಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಕುರಿತು ಬಂದ ಮಾಹಿತಿಯಂತೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ದಾಳಿ ವೇಳೆ ನಾಲ್ಕು ಮಂದಿ ಹೊಳೆಗೆ ಹಾರಿ ಈಜಿ ಕೊಂಡು ಪರಾರಿ ಯಾದರೆ, ಟಿಪ್ಪರ್ ಲಾರಿಯಲ್ಲಿದ್ದ ನಾಲ್ವರು ಓಡಿ ಪರಾರಿಯಾಗಿದ್ದಾರೆ. ಸ್ಥಳ ದಲ್ಲಿ ದಾಸ್ತಾನು ಇರಿಸಲಾಗಿದ್ದ ಮರಳು ಕೂಡ ಪತ್ತೆಯಾಗಿದೆ. ಹಾಡಿಯೊಳಗೆ ಅಡಗಿಸಿಟ್ಟಿದ್ದ ಒಂದು ಹಿಟಾಚಿ, ಡ್ರೆಜ್ಜಿಂಗ್ ಮೆಶಿನ್, ನಾಲ್ಕು ಟಿಪ್ಪರ್, ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಖಾಸಗಿ ದೂರನ್ನು ಇಲಾಖಾಧಿಕಾರಿಗಳು ನ್ಯಾಯಾಲಯದಲ್ಲಿ ದಾಖಲಿಸಲಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗಣಿ ಇಲಾಖೆ ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ, ಭೂ ವಿಜ್ಞಾನಿಗಳಾದ ಗೌತಮ್ ಶಾಸ್ತ್ರಿ, ಸಂಧ್ಯಾ ಕುಮಾರಿ, ಹಾಜಿರ ಸಜನಿ, ಚಾಲಕರಾದ ಕಿಶೋರ್, ಹರೀಶ್, ಕೇಶವ ಮೂರ್ತಿ ಮತ್ತು ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಬ್ರಹ್ಮಾವರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News