ಎಸ್ಸೈ ಜಯಪ್ರಕಾಶ್‌ಗೆ ಪ್ರೆಸಿಡೆನ್ಸಿಯಲ್ ಪೊಲೀಸ್ ಪದಕ

Update: 2020-08-14 16:54 GMT

ಮಂಗಳೂರು, ಆ.14: ಮಂಗಳೂರು ಪೊಲೀಸ್ ಕಮಿಷನರೇಟ್ ವಿಭಾಗದ ಕಂಟ್ರೋಲ್ ರೂಂನ ನಿಸ್ತಂತು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಬ್‌ಇನ್‌ಸ್ಪೆಕ್ಟರ್ ಕೆ.ಜಯಪ್ರಕಾಶ್ ಅವರಿಗೆ 2019-20ರ ಸಾಲಿನ ಪ್ರೆಸಿಡೆನ್ಸಿಯಲ್ ಪೊಲೀಸ್ ಪದಕ ಪ್ರಕಟಿಸಲಾಗಿದೆ.

ಸಿಟಿ ಕಂಟ್ರೋಲ್ ರೂಂನ ನಿಸ್ತಂತು ವಿಭಾಗದಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಕೋಮು ಸಂಘರ್ಷ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ನಿಸ್ತಂತು ವಿಭಾಗದಲ್ಲಿದ್ದು ಮಾಡಿದ ನಿರ್ವಹಣೆಗೆ ಈ ಪದಕ ಪ್ರಕಟಿಸಲಾಗಿದೆ. ದ.ಕ. ಜಿಲ್ಲೆಯಿಂದ ಈ ಅವಧಿಯಲ್ಲಿ ಪ್ರೆಸಿಡೆನ್ಸಿಯಲ್ ಪೊಲೀಸ್ ಪದಕಕ್ಕೆ ಭಾಜನರಾಗಿರುವ ಏಕೈಕ ಪೊಲೀಸ್ ಅಧಿಕಾರಿ ಇವರಾಗಿದ್ದಾರೆ.

ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆ ನಿವಾಸಿಯಾಗಿರುವ ಜಯಪ್ರಕಾಶ್ ಅವರು 2018ರಿಂದ ಮಂಗಳೂರು ನಗರ ಕಮಿಷನರ್ ಕಚೇರಿಯ ನಿಸ್ತಂತು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

1992ರಲ್ಲಿ ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಇಲಾಖೆಗೆ ಸೇರ್ಪಡೆಯಾದ ಇವರು 1998ರಲ್ಲಿ ದ.ಕ. ಜಿಲ್ಲಾ ನಿಸ್ತಂತು ವಿಭಾಗದಲ್ಲಿ ಹಿರಿಯ ಪೊಲೀಸ್ ಪೇದೆಯಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿಂದ 2012ರಲ್ಲಿ ಎಎಸ್‌ಐ ಆಗಿ ಬಡ್ತಿಗೊಂಡು ಮಡಿಕೇರಿ ಜಿಲ್ಲಾ ನಿಸ್ತಂತು ವಿಭಾಗ, ಬಳಿಕ 2013ರಲ್ಲಿ ಮತ್ತೆ ದ.ಕ. ಎಸ್ಪಿ ಕಚೇರಿಯ ನಿಸ್ತಂತು ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿಂದ ಪೊಲೀಸ್ ಕಮಿಷನರ್ ಕಚೇರಿಗೆ ವರ್ಗಾವಣೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News