ಕೋವಿಡ್ ಪರೀಕ್ಷೆ ಆರೋಗ್ಯ ಕಾಪಾಡುವ ಉತ್ತಮ ಮಾರ್ಗ-ಶಾಸಕ ಮಠಂದೂರು

Update: 2020-08-14 17:05 GMT

ಪುತ್ತೂರು: ಕೋವಿಡ್ ಪರೀಕ್ಷೆಯೂ ಆರೋಗ್ಯ ಕಾಪಾಡುವ ಉತ್ತಮ ಮಾರ್ಗ ಹಾಗಾಗಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ತನ್ನ ಮತ್ತು ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶುಕ್ರವಾರ ನಗರದ ನೆಲ್ಲಿಕಟ್ಟೆ ಶಾಲೆಯಲ್ಲಿ ನಗರಸಭೆಯ ವತಿಯಿಂದ ರೋಟರಿ ಕ್ಲಬ್ ಸೆಂಟ್ರಲ್ ಸಹಕಾರದಲ್ಲಿ ನಡೆದ ಉಚಿತ ಕೊರೋನ ತಪಾಸಣಾ ಶಿಬಿರ  (ರ್ಯಾಪಿಡ್ ಆ್ಯಂಟಿಜನ್)ದಲ್ಲಿ  ಸ್ವತಃ ಕೋವಿಡ್ ಪರೀಕ್ಷೆಗೊಳಪಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಚಿತ ಆರೋಗ್ಯ ತಪಾಸಣೆ ಎಂದಾಗ ಜನರು ಮುಂದೆ ಬರುತ್ತಾರೆ. ಆದರೆ ಕೋವಿಡ್ ಪರೀಕ್ಷೆ ಎಂದಾಗ ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಆದರೆ  ಜನರಲ್ಲಿ ಇದು ಕೂಡಾ ಆರೋಗ್ಯ ಕಾಪಾಡುವ ಒಂದು ಭಾಗ ಎಂದು ಅರಿವು ಮೂಡಿಸುವ ಅಗತ್ಯವಿದೆ ಎಂದ ಅವರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಎಲ್ಲಿ ನಮ್ಮನ್ನು ಅಸ್ಪ್ರಶ್ಯ ಭಾವನೆಯಿಂದ ನೋಡುತ್ತಾರೋ ಎಂಬ ಭಯವಿದೆ. ಅದನ್ನು ದೂರ ಮಾಡಬೇಕು. ತನ್ನ, ಮನೆಯವರ, ಮಿತ್ರರ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ಅಗತ್ಯ. ಸಮುದಾಯದಲ್ಲಿರುವ ಎಲ್ಲಾ ವ್ಯಕ್ತಿಗಳೂ ಆರೋಗ್ಯ ವಂತರಾಗಬೇಕು ಮತ್ತು ಸಮುದಾಯಕ್ಕೆ ಅದು ಹರಡಬಾರದು ಎಂದು ಪುತ್ತೂರು ವರ್ತಕರು, ಸಂಘ ಸಂಸ್ಥೆಗಳು ಸೇರಿಕೊಂಡು ಇಲಾಖೆ ಯೊಂದಿಗೆ ಸಹಕಾರ ನೀಡಿದ್ದಾರೆ ಎಂದರು.

ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಕ್ ರೈ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News