ಆಗಸ್ಟ್ ಅಂತ್ಯಕ್ಕೆ ಕೊರೋನ ಪ್ರಕರಣ ಶೇ.5ಕ್ಕೆ ಇಳಿಸುವ ಗುರಿ: ಡಿಸಿ ಜಗದೀಶ್

Update: 2020-08-15 14:37 GMT

ಉಡುಪಿ, ಆ.15: ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳು ಶೇ.25ರಷ್ಟಿದ್ದ ಕರೋನ ಪಾಸಿಟಿವ್ ಪ್ರಕರಣಗಳ ಪ್ರಮಾಣ, ಇಂದು ಶೇ.12ಕ್ಕೆ ಇಳಿಕೆಯಾಗಿದೆ. ಹೀಗೆ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ನಿಧಾನವಾಗಿ ಕಡಿಮೆ ಯಾಗುತ್ತಿರುವುದು ಕಂಡುಬರುತ್ತಿದೆ. ಇದೇ ರೀತಿ ಶ್ರಮ ವಹಿಸಿ ಈ ತಿಂಗಳ ಅಂತ್ಯಕ್ಕೆ ಪಾಸಿಟಿವ್ ಪ್ರಕರಣಗಳನ್ನು ಶೇ.5ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ನಿಯಂತ್ರಣ ಮೀರಿ ಹೆಚ್ಚಾಗುತ್ತಿದೆ ಎಂಬ ಸಾರ್ವಜನಿಕರ ಮನೋಭಾವ ತಪ್ಪು. ಜಿಲ್ಲೆಯಲ್ಲಿ ಮೊದಲು 500 ಮಂದಿ ಯನ್ನು ಪರೀಕ್ಷಿಸಿದಾಗ 100 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಈಗ 2000 ಮಂದಿಯನ್ನು ಪರೀಕ್ಷೆ ಮಾಡಿದಾಗ 300 ಪ್ರಕರಣಗಳು ಕಂಡು ಬರುತ್ತಿವೆ. ಸೋಂಕಿತರನ್ನು ಗುರುತಿಸಿ ಕೂಡಲೇ ಚಿಕಿತ್ಸೆ ನೀಡುವ ಉದ್ದೇಶದಿಂದ ಹೆಚ್ಚು ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಕಳೆದ ತಿಂಗಳ ಲಕ್ಷ್ಮಣಗಳಿರುವ ಕೊರೋನ ಪ್ರಕರಣಗಳು ಶೇ.50ಕ್ಕೂ ಅಧಿಕ ಮೀರಿತ್ತು. ಈಗ ಅದರ ಸಂಖ್ಯೆ ಶೇ.10ಕ್ಕಿಂತ ಒಳಗಡೆ ಇದೆ. 12 ದಿನಗಳ ಹಿಂದೆ ಜಿಲ್ಲೆಯ ಎಲ್ಲ ಐಸಿಯು ಬೆಡ್‌ಗಳು ತುಂಬಿದ್ದವು. ಈಗ ಐಸಿಯು ಬೆಡ್‌ಗಳು ಖಾಲಿಯಾಗಿವೆ. ಆದುದರಿಂದ ಸಾರ್ವಜನಿಕರು ಯಾರು ಕೂಡ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಮಾಸ್ಕ್, ಸುರಕ್ಷಿತ ಅಂತರ ಕಾಪಾಡುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಿಸಲು ಸರಕಾರ ಅವಕಾಶ ನೀಡಿದೆ. ಅದರಂತೆ ಸಂದರ್ಶನಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಎಂಟು ಮಂದಿ ಲ್ಯಾಬ್ ಟೆಕ್ನಿಶಿಯನ್ ಗಳನ್ನು ಆಯ್ಕೆ ಮಾಡಲಾಗಿದೆ. ಅದೇ ರೀತಿ ಗಂಟಲು ದ್ರವದ ಮಾದರಿ ಸಂಗ್ರಹಿಸಲು 20 ಮೊಬೈಲ್ ಟೀಂ ಮಾಡಲು ಸರಕಾರ ಅವಕಾಶ ನೀಡಿದೆ ಎಂದು ಅವರು ತಿಳಿಸಿದರು.

ಕೆಲಸದ ಸ್ಥಳಗಳಲ್ಲಿ ಸೀಲ್‌ಡೌನ್ ಇಲ್ಲ

ಸರಕಾರದ ಮಾರ್ಗಸೂಚಿ ಪ್ರಕಾರ ಇನ್ನು ಮುಂದೆ ಕೆಲಸದ ಸ್ಥಳಗಳನ್ನು ಸೀಲ್‌ಡೌನ್ ಮಾಡುವ ಅಗತ್ಯ ಇಲ್ಲ. ಸಂಸ್ಥೆಯ ಕಚೇರಿ ಅಥವಾ ಫ್ಯಾಕ್ಚರಿಗಳಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದರೆ ಒಂದು ದಿನ ಕಚೇರಿ ಕೆಲಸವನ್ನು ಸ್ಥಗಿತ ಗೊಳಿಸಿ, ಸ್ಯಾನಿಟೈಸ್ ಮಾಡಿ, ಮರುದಿನ ದಿಂದಲೇ ಕೆಲಸ ಆರಂಭಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಆದರೆ ಸೋಂಕಿತರ ಮನೆಯನ್ನು ಸೀಲ್‌ಡೌನ್ ಮಾಡಬೇಕು ಮತ್ತು ಅವರ ಪ್ರಾಥಮಿಕ ಸಂಪರ್ಕಿಸಿದವರನ್ನೆಲ್ಲ ಐಸೋಲೆಶನ್‌ಗೆ ಒಳಪಡಿಸಬೇಕಾಗುತ್ತದೆ. ಅದು ಬಿಟ್ಟು ದುಡ್ಡು ಇಲ್ಲದವರ ಕಚೇರಿಗಳನ್ನು ಮಾತ್ರ ಸೀಲ್‌ಡೌನ್ ಮಾಡಲಾಗುತ್ತಿದೆ ಎಂಬುದು ಆಧಾರ ರಹಿತ ಆರೋಪಗಳಾಗಿವೆ. ಯಾವುದೇ ಕಾರಣಕ್ಕೂ ಆ ರೀತಿಯ ಕೆಲಸ ಆಗಲ್ಲ. ಈ ಕುರಿತು ಆಯಾ ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News