ದ.ಕ. ಜಿಲ್ಲೆ: 271 ಮಂದಿಗೆ ಕೊರೋನ ಪಾಸಿಟಿವ್, ಕೋವಿಡ್‌ಗೆ ಆರು ಬಲಿ

Update: 2020-08-15 14:49 GMT

ಮಂಗಳೂರು, ಆ.15: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೋವಿಡ್ ಸೋಂಕಿಗೆ ಶನಿವಾರ ಮತ್ತೆ ಆರು ಮಂದಿ ಬಲಿಯಾಗುವ ಜೊತೆಗೆ ಹೊಸದಾಗಿ 271 ಮಂದಿಗೆ ಸೋಕು ತಗುಲಿರುವುದು ದೃಢಪಟ್ಟಿದೆ.

ಮಂಗಳೂರಿನ ನಾಲ್ವರು, ಹೊರಜಿಲ್ಲೆಯ ಇಬ್ಬರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಮೃತಪಟ್ಟವರೆಲ್ಲ ಕೊರೋನ ಸೋಂಕಿನ ಜೊತೆಗೆ ವಿವಿಧ ರೋಗಗಳಿಂದ ಬಳಲುತ್ತಿದ್ದರು. ಇವರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಸೋಂಕಿತ ಆರು ಮಂದಿ ಶನಿವಾರ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 262ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಂಕು ಹರಡುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶನಿವಾರ 271 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಶುಕ್ರವಾರದಂದು 307 ಮಂದಿಗೆ ಸೋಂಕು ತಗುಲಿತ್ತು. ಇಂದಿನ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ತ್ರಿಶತಕದ ಸನಿಹದಲ್ಲಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮಡುಗಟ್ಟಿದೆ.

ಸೋಂಕಿತರಲ್ಲಿ ಸಾಮಾನ್ಯ ಶೀತ ಲಕ್ಷಣ ಹೊಂದಿದವರ ಸಂಖ್ಯೆ (128) ಅಧಿಕವಿದೆ. ಇನ್ನು ಸೋಂಕಿತರ ಸಂಪರ್ಕದಲ್ಲಿದ್ದ 39 ಮಂದಿ, ತೀವ್ರ ಉಸಿರಾಟ ತೊಂದರೆ-10, ಸೋಂಕು ನಿಗೂಢ ಪ್ರಕರಣ-90, ಹೊರಜಿಲ್ಲೆಯ ನಾಲ್ವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರ ಪೈಕಿ 166 ಮಂದಿ ಪುರುಷರಿದ್ದರೆ, 105 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8,649ಕ್ಕೆ ಏರಿಕೆಯಾಗಿದೆ.

ಮಂಗಳೂರು ತಾಲೂಕಿನಲ್ಲಿ 177, ಬಂಟ್ವಾಳ-47, ಪುತ್ತೂರು-23, ಸುಳ್ಯ-1, ಬೆಳ್ತಂಗಡಿ-14, ಹೊರಜಿಲ್ಲೆಯ 9 ಮಂದಿಯಲ್ಲಿ ಸೋಂಕು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

202 ಮಂದಿ ಗುಣಮುಖ: ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 202 ಮಂದಿ ಕೊರೋನ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 6,317ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2,070 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 69,156 ಮಂದಿಯ ಸ್ಯಾಂಪಲ್ ಪರೀಕ್ಷಿಸಲಾಗಿದ್ದು, ಇದರಲ್ಲಿ 8,649 ಪಾಸಿಟಿವ್ ಬಂದಿದ್ದು, ಉಳಿದ 60,507 ಸ್ಯಾಂಪಲ್ ನೆಗೆಟಿವ್ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News