ನೀರು ತರಲೆಂದು ಹೋಗಿದ್ದ ವೃದ್ಧ ಬಾವಿಗೆ ಬಿದ್ದು ಮೃತ್ಯು
ಮಂಗಳೂರು, ಆ.15: ಇಲ್ಲಿನ ಜೆಪ್ಪು ಪ್ರದೇಶದಲ್ಲಿ ವೃದ್ಧರೋರ್ವ ನೀರು ತರಲೆಂದು ಬಾವಿಗೆ ತೆರಳಿದ್ದು, ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ನಗರದ ಜೆಪ್ಪು ಕುಡ್ಪಾಡಿಯ ನಿವಾಸಿ ಯಾದವ್ ಕುಂದರ್ (72) ಮೃತ ವೃದ್ಧ ಎಂದು ತಿಳಿದುಬಂದಿದೆ.
ಯಾದವ್ ಅವರು ಈ ಮೊದಲು ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನದ ವೇಳೆ ನೀರು ತರಲೆಂದು ಬಾವಿಗೆ ತೆರಳಿ ದಾಗ ಘಟನೆ ನಡೆದಿದೆ. ಬಾವಿಯು ಚಿಕ್ಕದಾಗಿದ್ದು, ನೀರು ಸೇದುವಾಗ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ವೃದ್ಧರ ಶವದ ಜೊತೆ ಕೊಡ, ಹಗ್ಗ ಪತ್ತೆಯಾಗಿದೆ. ಯಾದವ್ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ವೃದ್ಧನು ಮಧ್ಯಾಹ್ನದ ವೇಳೆಗೆ ಬಾವಿಗೆ ಬಿದ್ದಿದ್ದು, ಸಂಜೆ ವೇಳೆಗೆ ಕುಟುಂಬದವರ ಗಮನಕ್ಕೆ ಬಂದಿದೆ. ಸುದ್ದಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.