ಇರಾನ್‌ ಮೇಲಿನ ಶಸ್ತ್ರಾಸ್ತ್ರ ನಿಷೇಧ ನಿರ್ಣಯ ವಿಸ್ತರಣೆ ತಿರಸ್ಕರಿಸಿದ ಭದ್ರತಾ ಮಂಡಳಿ

Update: 2020-08-15 18:01 GMT

ವಿಶ್ವಸಂಸ್ಥೆ,ಆ.16: ಇರಾನ್‌ಗೆ ಜಾಗತಿಕ ಶಸ್ತ್ರಾಸ್ತ್ರಗಳ ಪೂರೈಕೆ ನಿಷೇಧ ಅವಧಿಯನ್ನು ವಿಸ್ತರಿಸಲು ಅಮೆರಿಕ ಮಂಡಿಸಿದ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತಿರಸ್ಕರಿಸಿದೆ.

 ಇರಾನ್‌ಗೆ ಶಸ್ತ್ರಾಸ್ತ್ರ ನಿರ್ಬಂಧವನ್ನು ವಿಸ್ತರಿಸುವ ನಿರ್ಣಯಕ್ಕೆ ಸಂಬಂಧಿಸಿ ಶುಕ್ರವಾರ ಭದ್ರತಾ ಮಂಡಳಿಯಲ್ಲಿ ನಡೆದ ಮತದಾನದಲ್ಲಿ ಅಮೆರಿಕಕ್ಕೆ ಸದಸ್ಯ ರಾಷ್ಟ್ರಗಳ ಪೈಕಿ ಕೇವಲ ಡೊಮಿನಿಕನ್ ರಿಪಬ್ಲಿಕ್‌ನಿಂದ ಮಾತ್ರವೇ ಬೆಂಬಲ ದೊರೆಯಿತು. 15 ಸದಸ್ಯ ಬಲದ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಜರ್ಮನಿ, ಬ್ರಿಟನ್ ಸೇರಿದಂತೆ 15 ಸದಸ್ಯ ರಾಷ್ಟ್ರಗಳು ಮತದಾನಕ್ಕೆ ಗೈರು ಹಾಜರಾಗಿದ್ದವು.

    ಇರಾನ್‌ಗೆ 13 ವರ್ಷಗಳಿಂದ ಹೇರಲಾಗಿರುವ ಶಸ್ತ್ರಾಸ್ತ್ರ ಮಾರಾಟ ನಿಷೇಧವನ್ನು ಇನ್ನೂ ಅನಿರ್ದಿಷ್ಟಾವಧಿಗೆ ವಿಸ್ತರಿಸುವುದನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರಾದ ರಶ್ಯ ಹಾಗೂ ಚೀನಾ ಪ್ರಬಲವಾಗಿ ವಿರೋಧಿಸಿದ್ದವು. ಇರಾನ್ ಹಾಗೂ ಅಮೆರಿಕ,ರಶ್ಯ, ಫ್ರಾನ್ಸ್ ಸೇರಿದಂತೆ ಆರು ಬಲಾಢ್ಯ ರಾಷ್ಟ್ರಗಳ ನಡುವೆ 2015ರಲ್ಲಿ ಏರ್ಪಟ್ಟಿದ್ದ ಪರಮಾಣು ಒಪ್ಪಂದದಡಿ ಇರಾನ್ ಮೇಲೆ ಹೇರಲಾಗಿರುವ ಶಸ್ತ್ರಾಸ್ತ್ರ ನಿಷೇಧವು ಅಕ್ಟೋಬರ್ 18ರಂದು ಕೊನೆಗೊಳ್ಳುವುದರಲ್ಲಿತ್ತು. ಈ ಹಿನ್ನೆಲೆಯಲ್ಲಿ ಅಮೆರಿವು ನಿಷೇಧವನ್ನು ವಿಸ್ತರಿಸುವಂತೆ ಆಗ್ರಹಿಸಿ ನಿರ್ಣಯ ಮಂಡಿಸಿತ್ತು.

 ಭದ್ರತಾ ಮಂಡಳಿಯಲ್ಲಿ ಇರಾನ್ ವಿರುದ್ಧ ತಾನು ಮಂಡಿಸಿದ ಗೊತ್ತುವಳಿ ಪರಾಭವಗೊಂಡಿರುವುದಕ್ಕೆ ಅಮೆರಿಕ ತೀವ್ರ ವಿಷಾದ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಲು ನಿರ್ಣಾಯಕವಾದ ರೀತಿಯಲ್ಲಿ ಕಾರ್ಯಾಚರಿಸುವಲ್ಲಿ ಭದ್ರತಾ ಮಂಡಳಿ ವಿಫಲವಾಗಿರುವುದು ಅಕ್ಷಮ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮೈಕ್ ಪಾಂಪಿಯೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಇರಾನ್ ಮೇಲಿನ ಶಸ್ತ್ರಾಸ್ತ್ರ ನಿಷೇಧ ಅವಧಿ ವಿಸ್ತರಣೆಯನ್ನು ಬೆಂಬಲಿಸಿದ್ದ ಇಸ್ರೇಲ್ ಹಾಗೂ ಆರು ಅರಬ್‌ ರಾಷ್ಟ್ರಗಳು ಕೂಡಾ ಭದ್ರತಾ ಮಂಡಳಿಯಲ್ಲಿ ನಿರ್ಣಯ ವಿಫಲಗೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿವೆ. ಶಸ್ತ್ರಾಸ್ತ್ರ ನಿಷೇಧದ ಅವಧಿ ಮುಗಿದಲ್ಲಿ ಇರಾನ್ ವ್ಯಾಪಕವಾದ ಅರಾಜಕತೆ ಹಾಗೂ ವಿನಾಶವನ್ನುಂಟು ಮಾಡಲಿದೆ ಎಂದು ಅವು ಆತಂಕ ವ್ಯಕ್ತಪಡಿಸಿವೆ.

 ಅಮೆರಿಕದ ನಿರ್ಣಯ ಪರಾಜಯಗೊಂಡಿರುವುದಕ್ಕೆ ಇರಾನ್ ಹರ್ಷ ವ್ಯಕ್ತಪಡಿಸಿದೆ. ಅಮೆರಿಕದ ಸಂಚು ಅಪಮಾನಕರವಾದ ರೀತಿಯಲ್ಲಿ ಪರಾಜಯಗೊಂಡಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News