ಹಾರುವ ತಟ್ಟೆಗಳ ತನಿಖೆಗೆ ಅಮೆರಿಕದಿಂದ ಕಾರ್ಯಪಡೆ ರಚನೆ

Update: 2020-08-15 18:03 GMT

ವಾಶಿಂಗ್ಟನ್, ಆ.15: ಈವರೆಗೂ ನಿಗೂಢವಾಗಿ ಉಳಿದಿರುವ ಹಾರುವ ತಟ್ಟೆಗಳ (ಯುಎಫ್‌ಓ) ಬಗ್ಗೆ ತನಿಖೆಯನ್ನು ನಡೆಸಲು ಅಮೆರಿಕ ನೌಕಾಪಡೆಯ ಉಸ್ತುವಾರಿಯಲ್ಲಿ ನೂತನ ಕಾರ್ಯಪಡೆಯೊಂದನ್ನು ರಚಿಸಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಾಗನ್ ತಿಳಿಸಿದೆ.

  ಹಾರುವ ತಟ್ಟೆಗಳ ಬಗ್ಗೆ ಅಧ್ಯಯನಕ್ಕಾಗಿ ಗುರುತಿಸಲ್ಪಡದ ವೈಮಾನಿಕ ವಿದ್ಯಮಾನಗಳ ತನಿಖಾ ಕಾರ್ಯಪಡೆ (ಯುಎಪಿಟಿಎಫ್)ಯನ್ನು ಸೃಷ್ಟಿಸಲಾಗಿದೆ ಎಂದು ಪೆಂಟಾಗನ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಯುಎಪಿಟಿಎಫ್‌ನ ರಚನೆಯಿಂದಾಗಿ, ಹಾರುವ ತಟ್ಟೆಗಳ ಸ್ವರೂಪ ಹಾಗೂ ಮೂಲಗಳ ಬಗ್ಗೆ ಇರುವ ಅರಿವನ್ನು ವೃದ್ದಿಗೊಳಿಸಲು ಸಾಧ್ಯವಾಗಲಿದೆ’’ ಎಂದು ರಕ್ಷಣಾ ಇಲಾಖೆಯ ವಕ್ತಾರೆ ಸುಸಾನ್ ಗಾಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ಹಾರುವ ತಟ್ಟೆಗಳನ್ನು ಅನ್ಯಗ್ರಹ ಜೀವಿಗಳು ಕಳುಹಿಸಿರುವ ಅಥವಾ ಪ್ರಯಾಣಿಸುತ್ತಿರುವ ನೌಕೆಗಳೆಂದು ಭಾವಿಸಲಾಗುತ್ತಿದೆ. ಆದರೆ ಅಮೆರಿಕವು ಚೀನಾವು ಹಾರುವ ತಟ್ಟೆಗಳ ರೂಪದ ಡ್ರೋನ್ ಅಥವಾ ಇತರ ವೈಮಾನಿಕ ವಾಹನಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳುವ ಸಾಧ್ಯತೆಯ ಬಗೆಗೂ ಆತಂಕ ಹೊಂದಿವೆ. ಈ ಹಿನ್ನೆಲೆಯಲ್ಲಿ ಅದು ಯುಎಫ್‌ಓಗಳ ಬಗ್ಗೆ ತನಿಖೆಯನ್ನು ತ್ವರಿತಗೊಳಿಸಿರುವ ಸಾಧ್ಯತೆಯಿದೆಯೆಂದು ಮೂಲಗಳು ಹೇಳಿವೆ.

ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗುವ ಸಾಧ್ಯತೆಯಿರುವ ಯುಎಫ್‌ಓಗಳನ್ನು ಈ ಕಾರ್ಯಪಡೆಯು ಪತ್ತೆಹಚ್ಚಲಿದೆ, ವಿಶ್ಲೇಷಿಸಲಿದೆಯೆಂದು ಗಾಗ್ ತಿಳಿಸಿದ್ದಾರೆ.

  ‘‘ನಮ್ಮ ತರಬೇತಿ ವಲಯ ಅಥವಾ ವಾಯುಕ್ಷೇತ್ರದಲ್ಲಿ ಅನಧಿಕೃತ ವೈಮಾನಿಕ ನೌಕೆಯು ಒಳನುಸುಳುವ ಯಾವುದೇ ವರದಿಯನ್ನು ಈ ಕಾರ್ಯಪಡೆಯುವ ಗಂಭೀರವಾಗಿ ಪರಿಗಣಿಸಲಿದೆ ಹಾಗೂ ಪರಿಶೀಲಿಸಲಿದೆ ’’ಎಂದು ಗಾಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News