×
Ad

8 ತಿಂಗಳ ಬಳಿಕ ಯೋಧನ ಮೃತದೇಹ ಹಿಮರಾಶಿಯೊಳಗೆ ಪತ್ತೆ

Update: 2020-08-16 14:42 IST

ಹೊಸದಿಲ್ಲಿ, ಆ.16:ಜನವರಿಯಿಂದ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಯೋಧನ ಮೃತದೇಹ ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಸಮೀಪ ಹಿಮರಾಶಿಯೊಳಗೆ ಶನಿವಾರ ಪತ್ತೆಯಾಗಿದೆ.

ಹವಾಲ್ದಾರ್ ರಾಜೇಂದ್ರ ಸಿಂಗ್ ನೇಗಿ ಅವರ ಕುಟುಂಬಕ್ಕೆ ತಕ್ಷಣವೇ ಮಾಹಿತಿ ನೀಡಲಾಗಿದೆ. ಹುತಾತ್ಮ ಯೋಧನಿಗೆ 36 ವರ್ಷ ವಯಸ್ಸಾಗಿದೆ. ಇಂಡಿಯನ್ ಆರ್ಮಿಯ 11 ಗರ್ವಾಲ್ ರೈಫಲ್ಸ್‌ಗೆ ಸೇರಿರುವ ನೇಗಿ ಕಾಶ್ಮೀರ ಸಮೀಪದ ಗುಲ್ಮಾರ್ಗ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ ಭಾರೀ ಹಿಮರಾಶಿಯಲ್ಲಿ ಆಕಸ್ಮಿಕವಾಗಿ ಜಾರಿಬಿದ್ದ ಬಳಿಕ ನಾಪತ್ತೆಯಾಗಿದ್ದರು.

ನೇಗಿ ಅವರ ಶವ ಪತ್ತೆ ಹಚ್ಚಲು ವಿಫಲವಾಗಿದ್ದ ಸೇನೆಯು ಜೂನ್‌ನಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಿತ್ತು. ಈ ಕುರಿತು ಅವರ ಕುಟುಂಬ ಸದಸ್ಯರಿಗೆ ಜೂ.21ರಂದು ಪತ್ರ ಬರೆದು ಮಾಹಿತಿ ನೀಡಿತ್ತು. ಆದರೆ, ನೇಗಿ ಅವರ ಪತ್ನಿ ರಾಜೇಶ್ವರಿ ಪತಿಯ ಸಾವಿನ ಸುದ್ದಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಪತಿಯ ಮೃತದೇಹ ಕಣ್ಣಾರೆ ನೋಡುವ ತನಕ ಸಾವಿನ ಸುದ್ದಿಯನ್ನು ನಂಬಲಾರೆ ಎಂದಿದ್ದರು.

ಶನಿವಾರ ಸ್ವಾತಂತ್ರದ ದಿನದಂದು ನೇಗಿಯ ಆರ್ಮಿಯ ಘಟಕ ಅವರು ಕುಟುಂಬ ಸದಸ್ಯರಿಗೆ ಮೃತದೇಹ ಪತ್ತೆಯಾದ ಕುರಿತು ಮಾಹಿತಿ ನೀಡಿದೆ. ಆರ್ಮಿಘಟಕ ಮಾಡಿದ್ದ ಕರೆಯನ್ನು ನೇಗಿ ಅವರ ಚಿಕ್ಕಪ್ಪ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News