ಭಾರತದಲ್ಲಿ ಸತತ 12 ದಿನಗಳಿಂದ ಅಮೆರಿಕ, ಬ್ರೆಝಿಲ್‌ಗಿಂತ ಅಧಿಕ ಕೋರೋನ ಪ್ರಕರಣಗಳು

Update: 2020-08-16 15:01 GMT

ಹೊಸದಿಲ್ಲಿ, ಆ.16: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 63,000ಕ್ಕೂ ಅಧಿಕ ಕೊರೋನ ಸೋಂಕಿನ ಹೊಸ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 25.89 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರವಿವಾರ ತಿಳಿಸಿದೆ.

ಅಮೆರಿಕ ಹಾಗೂ ಬ್ರೆಝಿಲ್ ನಂತರ ಕೊರೋನದಿಂದ ಅತಿ ಹೆಚ್ಚು ದುಷ್ಪರಿಣಾಮಕ್ಕೆ ಒಳಗಾದ ಮೂರನೇ ದೇಶವಾಗಿರುವ ಭಾರತದಲ್ಲಿ ಕಳೆದ 12 ದಿನಗಳಿಂದ ಕೊರೋನ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶ ತಿಳಿಸಿದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿಗೆ ಒಳಗಾಗಿ 800 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 49,000ಕ್ಕೆ ಏರಿಕೆಯಾಗಿದೆ. ಆಗಸ್ಟ್ 4ರಿಂದ ದಿನಂಪ್ರತಿ ಕೊರೋನ ಸೋಂಕಿನ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಟಾಪ್‌ನಲ್ಲಿದೆ.

ಕೊರೋನ ಸೋಂಕಿನ ಕೇಂದ್ರವಾಗಿರುವ ಅಮೆರಿಕದಲ್ಲಿ ಇದುವರೆಗೆ 53 ಲಕ್ಷ ಪ್ರಕರಣಗಳು ದಾಖಲಾಗಿವೆ. ಬ್ರೆಝಿಲ್‌ನಲ್ಲಿ 33 ಲಕ್ಷ ಪ್ರಕರಣಗಳು ದಾಖಲಾಗಿವೆ. ಬ್ರೆಝಿಲ್‌ನಲ್ಲಿ ಭಾರತಕ್ಕಿಂತ ಸುಮಾರು 7 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ಇವೆ. ಭಾರತದಲ್ಲಿ ಇದುವರೆಗೆ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 18.62 ಲಕ್ಷ. ಇದರೊಂದಿಗೆ ಇಂದು ಬೆಳಗ್ಗೆ ಈ ಪ್ರಮಾಣ ಶೇ. 71.91ಕ್ಕೆ ಏರಿಕೆಯಾಗಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ನಿನ್ನೆಗಿಂತ ಇಂದು ಸುಧಾರಿಸಿದೆ. ನಿನ್ನೆ ಗುಣಮುಖರಾದವರ ಪ್ರಮಾಣ ಶೇ. 71.6 ಇತ್ತು. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರ, ಕರ್ನಾಟಕಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಉತ್ತರಪ್ರದೇಶಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆಯಿಂದ ಈ ರಾಜ್ಯಗಳಲ್ಲಿ ಕೊರೋನ ಸಂಬಂಧಿತ ಅತ್ಯಧಿಕ ಸಾವು ಕೂಡ ಸಂಭವಿಸಿದೆ ಎಂದು ಸರಕಾರದ ದತ್ತಾಂಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News