ರಾಮ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥರ ಜೊತೆ ಕುಳಿತಿದ್ದ ಪ್ರಧಾನಿ ಕ್ವಾರಂಟೈನ್ ನಿಯಮ ಪಾಲಿಸುತ್ತಾರೆಯೇ ?

Update: 2020-08-16 15:40 GMT

ಮುಂಬೈ, ಆ.16: ರಾಮ ಜನ್ಮಭೂಮಿ ಟ್ರಸ್ಟ್‌ನ ಮುಖ್ಯಸ್ಥ ನೃತ್ಯಗೋಪಾಲ ದಾಸ್ ಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಅವರೊಂದಿಗೆ ಆಗಸ್ಟ್ 5ರಂದು ವೇದಿಕೆ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಕ್ವಾರಂಟೈನ್ ನಿಯಮ ಪಾಲಿಸುತ್ತಾರೆಯೇ ? ಎಂದು ಶಿವಸೇನೆ ಪ್ರಶ್ನಿಸಿದೆ.

 ಆಗಸ್ಟ್ 5ರಂದು ನಡೆದ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 75 ವರ್ಷದ ಮಹಾಂತ ನೃತ್ಯಗೋಪಾಲ ದಾಸ್ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ. ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪಾಲ್ಗೊಂಡಿದ್ದರು. ಈ ಸಂದರ್ಭ ಮೋದಿ ಗೌರವ ಸೂಚಕವಾಗಿ ನೃತ್ಯಗೋಪಾಲ ದಾಸ್ ಅವರ ಕೈಗಳನ್ನು ಹಿಡಿದಿದ್ದರು. ಆದ್ದರಿಂದ ಪ್ರಧಾನಿ ಕೂಡಾ ಕ್ವಾರಂಟೈನ್‌ಗೆ ಒಳಗಾಗುವರೇ ? ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಶ್ನಿಸಲಾಗಿದೆ.

 ಗೃಹ ಸಚಿವ ಅಮಿತ್ ಶಾ ಕೂಡಾ ಕ್ವಾರಂಟೈನ್‌ನಲ್ಲಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆರೋಗ್ಯಸ್ಥಿತಿಯೂ ಹದಗೆಟ್ಟಿದೆ. ಕೇಂದ್ರದ ಸಚಿವರು, ಅಧಿಕಾರಿಗಳು, ಸಂಸದರ ಸಹಿತ ಕೊರೋನ ಸೋಂಕಿನ ಭೀತಿ ಎಲ್ಲೆಡೆ ಹರಡಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೊರೋನ ಶಿಷ್ಟಾಚಾರದ ವಿಷಯದಲ್ಲಿ ನಿರ್ಲಕ್ಷ ತಳೆಯಬಾರದು ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News