ಉತ್ತರಪ್ರದೇಶ: ಗ್ರಾಪಂ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ, ಇಬ್ಬರು ಸಾವು

Update: 2020-08-16 16:20 GMT

ಪ್ರತಾಪ್‌ಗಢ, ಆ. 16: ಉತ್ತರಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಸಭೆಯ ಸಂದರ್ಭ ಎರಡು ಗುಂಪುಗಳ ನಡುವೆ ಸಂಭವಿಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಹಾಗೂ ಆತನ ಪುತ್ರ ರವಿವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಣಿಗಂಜ್ ಪ್ರದೇಶದ ಶೇಖ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದ ಬಳಿಕ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಓರ್ವ ಸಬ್ ಇನ್ಸ್‌ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಯಾಶಂಕರ್ ಮಿಶ್ರಾ (60) ಹಾಗೂ ಚಂದ್ರಮಣಿ ಮಿಶ್ರಾ ನಡುವಿನ ಭೂವಿವಾದ ಪರಿಹರಿಸಲು ಪಂಚಾಯತ್‌ನಲ್ಲಿ ಸಭೆ ಕರೆಯಲಾಗಿತ್ತು ಎಂದು ಪೊಲೀಸ್ ಅಧೀಕ್ಷಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. ಸಭೆಯ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ದಯಾಶಂಕರ್, ಅವರ ಪುತ್ರ ಆನಂದ್ ಮಿಶ್ರಾ (28) ಹಾಗೂ ಚಂದ್ರಮಣಿ ಮಿಶ್ರಾ ಗಂಭೀರ ಗಾಯಗೊಂಡಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.

ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ದಯಾಶಂಕಕರ್ ಹಾಗೂ ಆನಂದ್ ಮೃತಪಟ್ಟಿದ್ದಾರೆ. ಚಂದ್ರಮಣಿ ಅವರನ್ನು ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News