ಹೈದರಾಬಾದ್‌ನಲ್ಲಿ ಭಾರೀ ಮಳೆ: ಹಲವು ಪ್ರದೇಶಗಳು ಜಲಾವೃತ

Update: 2020-08-16 16:25 GMT

ಹೈದರಾಬಾದ್, ಆ. 16: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹೈದರಾಬಾದ್‌ನ ಗ್ರಾಮೀಣ ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೆಲಂಗಾಣದ ಹಲವು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಅಲ್ಲದೆ ಹೈದರಾಬಾದ್‌ನ 600ಕ್ಕೂ ಅಧಿಕ ಕಟ್ಟಡಗಳನ್ನು ದುರ್ಬಲ ಎಂದು ಘೋಷಿಸಿದೆ. ನೆರೆಯ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆಲವೆಡೆ ನದಿ ಹಾಗೂ ತೊರೆಗಳು ತುಂಬಿ ಹರಿಯುತ್ತಿರುವ ಬಗ್ಗೆ ವರದಿಯಾಗಿದೆ. ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಕುಂಡನ್ಪಲ್ಲಿ ಗ್ರಾಮದಲ್ಲಿ 12 ಕಾರ್ಮಿಕರನ್ನು ಹೆಲಿಕಾಪ್ಟರ್ ಬಳಸಿ ರಕ್ಷಿಸಲಾಗಿದೆ. ಸಿದ್ದಿಪೇಟೆಯಲ್ಲಿ ಟ್ರಕ್ಕೊಂದು ನೆರೆಗೆ ಕೊಚ್ಚಿ ಹೋಗಿದೆ. ಲಾರಿಯ ಚಾಲಕ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ, ಕ್ಲೀನರ್ ಅನ್ನು ರಕ್ಷಿಸಲಾಗಿದೆ. ಹೈದರಾಬಾದ್‌ಲ್ಲಿ ಎರಡು ಕಂಟ್ರೋಲ್ ರೂಮ್ ತೆರೆಯಲಾಗಿದೆ. ರಕ್ಷಣಾ ಕಾರ್ಯಚರಣೆಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ರಾಜ್ಯ ವಿಪತ್ತು ಸ್ಪಂದನಾ ತಂಡ ಮುನ್ನೆಚ್ಚರಿಕೆ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News