×
Ad

ದೇವಸ್ಥಾನ, ಮನೆಯಲ್ಲಿ ಮಾತ್ರ ಸರಳ ಗಣೇಶೋತ್ಸವ: ದ.ಕ.ಜಿಲ್ಲಾಧಿಕಾರಿ ಆದೇಶ

Update: 2020-08-16 22:07 IST

ಮಂಗಳೂರು, ಆ.16: ಕೊರೋನ ಸೋಂಕು ಗಣನೀಯವಾಗಿ ವ್ಯಾಪಕಗೊಳ್ಳುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದೇವಸ್ಥಾನ ಮತ್ತು ಮನೆಗಳಲ್ಲಿ ಮಾತ್ರವೇ ಸರಳವಾಗಿ ಗಣೇಶ ಚತುರ್ಥಿ ಆಚರಿಸಲು ಅವಕಾಶ ಕಲ್ಪಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

ಸರಕಾರದ ಮಾರ್ಗಸೂಚಿಯನ್ವಯ ಹಬ್ಬ ಆಚರಣೆ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸುರಕ್ಷಿತ ಅಂತರ ಮರೆತು ಒಂದೆಡೆ ಸೇರುವಂತಿಲ್ಲ. ಹಬ್ಬವನ್ನು ರಸ್ತೆ, ಮೈದಾನ, ಏರಿಯಾಗಳಂತಹ ಸಾರ್ವಜನಿಕ ಸ್ಥಳದಲ್ಲಿ ಆಚರಿಸುವಂತಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದನ್ನು ನಿರ್ಬಂಧಿಸಲಾಗಿದೆ.

ಯಾವುದೇ ಕಾರಣಕ್ಕೂ ನದಿ, ಕೆರೆ, ಕೊಳ, ಬಾವಿ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅವಕಾಶವಿಲ್ಲ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವ ಸಂದರ್ಭ ಮೆರವಣಿಗೆ ನಡೆಸುವಂತಿಲ್ಲ. ಹಬ್ಬ ಆಚರಿಸುವ ದೇವಸ್ಥಾನದಲ್ಲಿ ದಿನನಿತ್ಯ ಸ್ಯಾನಿಟೈಜೇಶನ್ ಮಾಡುವುದು, ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ಭಕ್ತರ ನಡುವೆ ಕನಿಷ್ಠ ಆರು ಅಡಿ ಅಂತರ ಇರುವುದನ್ನು ಖಾತ್ರಿಪಡಿಸಿಕೊಳ್ಳುವುದು, ಕಡ್ಡಾಯ ಮುಖಗವಸು ಹಾಕಿಕೊಳ್ಳಬೇಕು. ರಾಜ್ಯ, ರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಐಪಿಸಿ 188ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News