×
Ad

ಸ್ವಾತಂತ್ರ್ಯ ಹೋರಾಟಗಾರ ಇಬ್ರಾಹೀಂ ಬೊಳ್ಳಾಡಿಗೆ ಸನ್ಮಾನ

Update: 2020-08-16 22:38 IST

ಮಂಗಳೂರು, ಆ.16: ಸಂವೇದನಾ ಆರ್ಟ್ಸ್ ಆ್ಯಂಡ್ ಕಲ್ಚರಲ್ ಫೋರಮ್ ಕರ್ನಾಟಕ ಇದರ ದ.ಕ.ಜಿಲ್ಲಾ ಘಟಕದ ವತಿಯಿಂದ ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹಾಜಿ ಇಬ್ರಾಹಿಂ ಬೊಳ್ಳಾಡಿ ಅವರನ್ನು ಅವರ ಸ್ವಗೃಹದಲ್ಲಿ ಶನಿವಾರ ಸನ್ಮಾನಿಸಲಾಯಿತು.

ಈ ಸಂದರ್ಭ ಇಬ್ರಾಹೀಂ ಬೊಳ್ಳಾಡಿ ಗಾಂಧೀಜಿಯವರೊಂದಿಗೆ ಸತ್ಯಾಗ್ರಹಗಳಲ್ಲಿ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಭಾಗವಹಿಸಿದ್ದನ್ನು, ಪುತ್ತೂರು ಕಟ್ಟೆ ಮತ್ತು ಕುಂಬ್ರ ಕಟ್ಟೆಯಲ್ಲಿ ಗಾಂಧೀಜಿ ಭಾಷಣ ಮಾಡಿದ್ದನ್ನು ನೆನಪಿಸಿಕೊಂಡರು. ಸ್ವಾತಂತ್ರ್ಯ ಸಂಗ್ರಾಮ ಕಾಲದ ನಾಯಕರಾದ ಕುಂಬ್ರ ಜತ್ತಪ್ಪರೈ, ಮುಗಿರೆ ಮೊಯ್ದಿನ್ ಕುಂಞಿ, ಮಂಞಣ್ಣ ರೈ ಮುಂತಾದವರನ್ನು ಸ್ಮರಿಸಿದರು. ಕಾಂಗ್ರೆಸ್‌ನ ಮುಂಬೈ, ಕಲ್ಕತ್ತಾ, ದೆಹಲಿ, ಮದ್ರಾಸ್ ಅಧಿವೇಶನಗಳಲ್ಲಿ ಭಾಗವಹಿಸಿದ ನೆನಪಿನ ಬುತ್ತಿಯನ್ನು ಬಿಚ್ಚಿದರು.

ಕುಂಬ್ರ ಇಸ್ಲಾಮಿಕ್ ಅಕಾಡಮಿಯ ಉಪನ್ಯಾಸಕ ನವಾಝ್ ಕಟ್ಟದಪಡ್ಪು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂವೇದನಾ ಜಿಲ್ಲಾ ಸಂಚಾಲಕ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿದರು. ಲೇಖಕ ಇಸ್ಮತ್ ಪಜೀರ್ ಬೊಳ್ಳಾಡಿಯವರ ಅನುಭವಗಳ ದಾಖಲೀಕರಣದ ಅಗತ್ಯತೆಗಳ ಬಗ್ಗೆ ಮಾತನಾಡಿದರು. ಸಂವೇದನಾ ಪುತ್ತೂರು ತಾಲೂಕು ಸಂಚಾಲಕ ಅಸ್ಲಮ್ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು. ಸಂವೇದನಾ ಬಂಟ್ವಾಳ ತಾಲೂಕು ಸಂಚಾಲಕ ರಿಝ್‌ವಾನ್ ಅಝ್‌ಹರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನಿತರ ಸಹೋದರ ಫಕ್ರು ಬ್ಯಾರಿ, ಲೇಖಕ ಎ.ಎಸ್.ಮಂಡಾಡಿ, ಬಾಷಾ ನಾಟೆಕಲ್, ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News