ಕೆನಡದ ಸರಕಾರಿ ಆನ್‌ಲೈನ್ ಸೇವೆಗಳಿಗೆ ಹ್ಯಾಕರ್‌ಗಳ ಕನ್ನ

Update: 2020-08-16 18:13 GMT

ಟೊರಾಂಟೊ, ಆ.16: ಕೆನದ ಆನ್‌ಲೈನ್ ಸರಕಾರಿ ಸೇವೆಗಳ ಮೇಲೆ ಸೈಬರ್ ದಾಳಿ ನಡೆದಿದ್ದು, ಸಾವಿರಾರು ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆಯೆಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕೆನಡ ಸರಕಾರದ 30 ಫೆಡರಲ್ ಇಲಾಖೆಗಳು ಹಾಗೂ ಕೆನಡ ರೆವೆನ್ಯೂ ಏಜೆನ್ಸಿ ಖಾತೆಗಳ ಗ್ರಾಹಕರು ಬಳಸುವ ಜಿ.ಸಿ.ಕೀ ಸರ್ವಿಸ್ ವೆಬ್‌ಪೋರ್ಟಲ್ ಅನ್ನು ಗುರಿಯಿರಿಸಿ ಹ್ಯಾಕರ್‌ಗಳು ಈ ದಾಳಿಗಳನ್ನು ನಡೆಸಿದ್ದಾರೆಂದು ಕೆನಡ ಖಜಾನೆ ಮಂಡಳಿಯು ಪತಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

9041 ಜಿಸಿಕೀ ಖಾತೆದಾರರ ಯೂಸರ್‌ನೇಮ್‌ಗಳನ್ನು ಹಾಗೂ ಪಾಸ್‌ವರ್ಡ್‌ಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡು, ಅವುಗಳ ಮೂಲಕ ಸರಕಾರಿ ಸೇವೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆನಡಾ ಕಂದಾಯ ಇಲಾಖೆಯ 5500 ಬಳಕೆದಾರರ ಆನ್‌ಲೈನ್ ಖಾತೆಗಳಿಗೂ ಹ್ಯಾಕರ್‌ಗಳು ದಾಳಿಯಿಟ್ಟಿದ್ದಾರೆಂದು ಅವರು ಹೇಳಿದ್ದಾರೆ. ತೆರಿಗೆಪಾವತಿದಾರರ ಮಾಹಿತಿಯನ್ನು ರಕ್ಷಿಸಲು ಈ ಖಾತೆಗಳನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ ತಿಂಗಳ ಆರಂಭದಿಂದೀಚೆಗೆ ಕೆನಡಾ ಕಂದಾಯ ಇಲಾಖೆಯ ಖಾತೆಗಳ ಜೊತೆ ಜೋಡಿಸಲಾಗಿರುವ ತಮ್ಮ ಬ್ಯಾಂಕಿಂಗ್ ಮಾಹಿತಿಗಳನ್ನು ತಿರುಚಲಾಗಿದೆಯೆಂದು ಕೆನಡದ ಹಲವಾರು ನಾಗರಿಕರು ದೂರು ನೀಡಿದ್ದಾರೆ.

ಕೋವಿಡ್-19 ಸೋಂಕಿತರಿಗೆ ನೀಡಲಾಗುವ ಆರ್ಥಿಕ ನೆರವಿನ ಪ್ಯಾಕೇಜ್ ನಡಿ ತಮಗೆ ಮಾಡಲಾದ ಹಣಪಾವತಿಗಳ ಕುರಿತ ವಿವರಗಳನ್ನು ಕೂಡಾ ಅವರ ಅನುಮತಿಯಿಲ್ಲದೆ ಪ್ರಕಟಸಲಾಗಿದೆಯೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News