ದೇಶವ್ಯಾಪಿ ಎನ್‍ಆರ್ ಸಿ ಜಾರಿಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಪಿಐಎಲ್ ಸಲ್ಲಿಕೆ

Update: 2020-08-18 09:57 GMT

ಹೊಸದಿಲ್ಲಿ:  ರಾಷ್ಟ್ರೀಯ ಪೌರತ್ವ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ) ಅನ್ನು ದೇಶವ್ಯಾಪಿ ಜಾರಿಗೊಳಿಸಿ ಈ ಮೂಲಕ ಪೌರತ್ವ ಕಾಯಿದೆ 1955ರ ಸೆಕ್ಷನ್ 14ಎ ಅನ್ವಯವಾಗುವಂತೆ ಮಾಡಲು ಸರಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟಿನಲ್ಲಿ ಪಿಐಎಲ್ ದಾಖಲಿಸಲಾಗಿದೆ.

ವಕೀಲರುಗಳಾದ ವಿಷ್ಣು ಶಂಕರ್ ಜೈನ್ ಹಾಗೂ ಹರಿ ಶಂಕರ್ ಜೈನ್ ಅವರು ಆರು ಮಂದಿ ಅಪೀಲುದಾರರ ಪರ ಈ ಅಪೀಲು ಸಲ್ಲಿಸಿದ್ದಾರೆ. ವಿದೇಶೀಯರ ಕಾಯಿದೆ 1946ಗೆ ವಿರುದ್ಧವಾಗಿ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶೀಯರ ವಿರುದ್ಧ  ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಬೇಕೆಂದೂ ಅಪೀಲಿನಲ್ಲಿ ಕೋರಲಾಗಿದೆ.

ರಾಷ್ಟ್ರವ್ಯಾಪಿಯಾಗಿ ಎನ್‍ಆರ್ ಸಿ ಜಾರಿಗೊಳಿಸುವ ಮೂಲಕ ಅಕ್ರಮ ವಿದೇಶಿ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

“ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳ ಮತದಾರರ ಪಟ್ಟಿಯನ್ನು ಪರಿಶೀಲಿಸಿ ವಿದೇಶಿ ನಾಗರಿಕರ ಹೆಸರುಗಳನ್ನು ತೆಗೆದು ಹಾಕಬೇಕು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಮುನ್ನ ಸರಕಾರ  ನಾಗರಿಕರ ರಾಷ್ಟ್ರೀಯತೆಯನ್ನು ದೃಢಪಡಿಸಿಕೊಳ್ಳಬೇಕು” ಎಂದು ಅಪೀಲಿನಲ್ಲಿ ಕೋರಲಾಗಿದೆ.

“ದೇಶದಲ್ಲಿ ಲಕ್ಷಗಟ್ಟಲೆ ಜನರು ಅಕ್ರಮವಾಗಿ ವಾಸಿಸುತ್ತಿರುವುದರಿಂದ ಅದು ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯವೊಡ್ಡುತ್ತಿದೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳನ್ನು ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಅನುಮತಿ ನೀಡಿರುವುದರಿಂದ ಅಕ್ರಮ ವಿದೇಶೀಯರು ತಪ್ಪು ಮಾರ್ಗಗಳ ಮೂಲಕ ಆಧಾರ್, ಪ್ಯಾನ್ ಮತ್ತು ರೇಷನ್ ಕಾರ್ಡ್ ಪಡೆದಿದ್ದಾರೆ.  ಈ ಫೋರ್ಜರಿ ದಾಖಲೆಗಳನ್ನು ಬಳಸಿ ಅವರು ಇಲ್ಲಿ ಉದ್ಯೋಗ ಪಡೆದು ಹಾಗೂ ಸರಕಾರಿ ಯೋಜನೆಗಳ ಲಾಭ ಪಡೆದಿದ್ದಾರೆ, ಅಷ್ಟೇ ಅಲ್ಲದೆ ಅರ್ಹ ಭಾರತೀಯ ನಾಗರಿಕರನ್ನು ಉದ್ಯೋಗ ವಂಚಿತರನ್ನಾಗಿಸಿದ್ದಾರಲ್ಲದೆ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನೂ ಸೃಷ್ಟಿಸಿದ್ದಾರೆ” ಎಂದೂ ಅಪೀಲಿನಲ್ಲಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News