ಫೇಸ್‌ಬುಕ್ ಖಾತೆ 2018ರಲ್ಲೇ ಹ್ಯಾಕ್ ಆಗಿತ್ತು: ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿಕೆ

Update: 2020-08-18 15:46 GMT

ಹೈದರಾಬಾದ್, ಆ.18: ಫೇಸ್‌ಬುಕ್‌ನಲ್ಲಿ ತಾನು ಕೋಮು ಭಾವನೆಯ ಹೇಳಿಕೆಯನ್ನು ಅಪ್‌ಲೋಡ್ ಮಾಡುತ್ತಿರುವುದಾಗಿ ಕೇಳಿ ಬಂದಿರುವ ಆರೋಪವನ್ನು ನಿರಾಕರಿಸಿರುವ ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಸಿಂಗ್, ತನ್ನ ಅಧಿಕೃತ ಫೇಸ್‌ಬುಕ್ ಖಾತೆ 2018ರಲ್ಲೇ ಹ್ಯಾಕ್ ಆಗಿದ್ದ ಕಾರಣ ಅದನ್ನು ಬ್ಲಾಕ್ ಮಾಡಿದ್ದೇನೆ ಎಂದಿದ್ದಾರೆ.

ತಾನು ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಹೇಳಿಕೆ ನೀಡಿದರೆ ಏನಾದರೊಂದು ಅನಾಹುತ ನಡೆಯುತ್ತದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತದೆ. ತನ್ನ ಹೆಸರಲ್ಲಿ ಹಲವು ಅನಧಿಕೃತ ಫೇಸ್‌ಬುಕ್ ಖಾತೆ ಸಕ್ರಿಯವಾಗಿರುವ ಮಾಹಿತಿಯಿದೆ. ಈಗ ತಾನು ಅಧಿಕೃತವಾಗಿ ಯಾವುದೇ ಫೇಸ್‌ಬುಕ್ ಖಾತೆಯನ್ನು ಹೊಂದಿಲ್ಲ. ಆದ್ದರಿಂದ ಫೇಸ್‌ಬುಕ್‌ನ ಯಾವುದೇ ಪೋಸ್ಟ್ ಬಗ್ಗೆ ತಾನು ಜವಾಬ್ದಾರನಲ್ಲ ಎಂದು ಸಿಂಗ್ ರವಿವಾರ ಬಿಡುಗಡೆಗೊಳಿಸಿರುವ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಫೇಸ್‌ಬುಕ್ ಖಾತೆ ಹ್ಯಾಕ್ ಅಗಿರುವ ಬಗ್ಗೆ ಸೈಬರಬಾದ್ ಪೊಲೀಸರಲ್ಲಿ ದೂರು ದಾಖಲಿಸಿದ್ದರೂ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ. ಎಐಎಂಐಎಂ ನಾಯಕರಂತೆ ಪ್ರಚೋದನಕಾರಿ ಹೇಳಿಕೆ ನೀಡುವ ಹಲವು ರಾಜಕೀಯ ನಾಯಕರು ದೇಶದಲ್ಲಿದ್ದಾರೆ. ಆದರೆ ತಾನು ಇದುವರೆಗೂ ಇಂತಹ ಹೇಳಿಕೆ ನೀಡಿಲ್ಲ. ತನ್ನ ಹೆಸರಲ್ಲಿ ಒಂದು ಯೂಟ್ಯೂಬ್ ಖಾತೆ ಮತ್ತು ಟ್ವಿಟರ್ ಖಾತೆಯಿದೆ. ಇದರಲ್ಲಿ ದ್ವೇಷ ಹೇಳಿಕೆ ನೀಡಿದ ಒಂದಾದರೂ ಉದಾಹರಣೆ ಒದಗಿಸಿ ಎಂದು ಸವಾಲೆಸೆದಿರುವ ಸಿಂಗ್, ತಾನು ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವ ವ್ಯಕ್ತಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News