ಕೊರೋನ ಬಿಕ್ಕಟ್ಟು: ದೇಶದಲ್ಲಿ 41 ಲಕ್ಷ ಯುವಜನತೆಗೆ ಉದ್ಯೋಗ ನಷ್ಟ

Update: 2020-08-18 15:41 GMT

ಹೊಸದಿಲ್ಲಿ, ಆ.18: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಸುಮಾರು 41 ಲಕ್ಷ ಯುವಜನತೆ ಉದ್ಯೋಗ ಕಳೆದುಕೊಂಡಿದ್ದು ಇದರಲ್ಲಿ ನಿರ್ಮಾಣ ಕ್ಷೇತ್ರ ಮತ್ತು ಕೃಷಿ ಕ್ಷೇತ್ರದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಷನ್ (ಐಎಲ್‌ಒ) -ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಐಡಿಬಿ)ನ ಜಂಟಿ ವರದಿ ತಿಳಿಸಿದೆ.

ಕೊರೋನ ಸೋಂಕಿನಿಂದಾಗಿ ಏಶ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ಯುವ ಜನತೆಯ ಉದ್ಯೋಗಾವಕಾಶದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ‘ಟ್ಯಾಕ್ಲಿಂಗ್ ದಿ ಕೋವಿಡ್-19 ಯೂತ್ ಎಂಪ್ಲಾಯ್‌ಮೆಂಟ್ ಕ್ರೈಸಿಸ್ ಇನ್ ಏಶ್ಯಾ ಆ್ಯಂಡ್ ದಿ ಪೆಸಿಫಿಕ್’ ಎಂಬ ಶೀರ್ಷಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಮತ್ತು ಏಶ್ಯ ಅಭಿವೃದ್ಧಿ ಬ್ಯಾಂಕ್(ಎಡಿಬಿ)ಯ ಜಂಟಿ ವರದಿ ಮಂಗಳವಾರ ಪ್ರಕಟವಾಗಿದೆ. 25 ಮತ್ತು ಹೆಚ್ಚಿನ ವಯಸ್ಸಿನವರಿಗಿಂತ 15-24ರ ವಯೋಮಾನದವರು ಹೆಚ್ಚಿನ ಸಮಸ್ಯೆ ಅನುಭವಿಸಿದ್ದಾರೆ. ಕೊರೋನ ಸೋಂಕಿನಿಂದ ಭಾರತದಲ್ಲಿ ಮೂರನೇ ಎರಡರಷ್ಟು ಅಭ್ಯಾಸಾವಧಿ( ಅಪ್ರೆಂಟಿಸ್‌ಶಿಪ್) ಹಾಗೂ ಮುಕ್ಕಾಲು ಪಾಲು ಇಂಟರ್ನ್‌ಶಿಪ್‌ಗೆ ಅಡ್ಡಿಯಾಗಿದೆ. ಕೊರೋನ ಸೋಂಕಿಗಿಂತ ಮೊದಲು ಕೂಡಾ ಏಶ್ಯ ಮತ್ತು ಪೆಸಿಫಿಕ್ ವಲಯದ ಯುವಜನತೆ ಉದ್ಯೋಗ ರಂಗದಲ್ಲಿ ತೀವ್ರ ಸವಾಲು ಎದುರಿಸಿದ್ದು ಇದು ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಯುವಜನತೆ ಶಾಲೆಯಿಂದ ಮತ್ತು ಕೆಲಸದಿಂದ ಹೊರಗುಳಿಯಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.

2020ರಲ್ಲಿ ಏಶ್ಯಾ ಮತ್ತು ಪೆಸಿಫಿಕ್ ದೇಶಗಳಲ್ಲಿ 1 ರಿಂದ 1.5 ಕೋಟಿಯಷ್ಟು ಯುವಜನತೆಯ ಕೆಲಸ ನಷ್ಟವಾಗಿದೆ. ವಯಸ್ಕರಿಗಿಂತ ಯುವಜನತೆ ಉದ್ಯೋಗ ನಷ್ಟದಿಂದ ಹೆಚ್ಚಿನ ಸಮಸ್ಯೆಗೆ ಒಳಗಾಗಲು ಪ್ರಮುಖ ಕಾರಣವೆಂದರೆ, ಯುವಜನರಲ್ಲಿ ಅರ್ಧಾಂಶಕ್ಕಿಂತ ಅಧಿಕ ಜನ ಸಗಟು(ಹೋಲ್‌ಸೇಲ್), ಚಿಲ್ಲರೆ ವ್ಯಾಪಾರ, ಉತ್ಪಾದನೆ ಕ್ಷೇತ್ರ, ಬಾಡಿಗೆ ವ್ಯವಹಾರ, ವಾಸ್ತವ್ಯ ಮತ್ತು ಆಹಾರ ಸೇವೆ ಒದಗಿಸುವ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು ಮತ್ತು ಈ ನಾಲ್ಕು ಕ್ಷೇತ್ರಗಳು ಕೊರೋನ ಸೋಂಕಿನಿಂದಾಗಿ ಅತ್ಯಂತ ಹೆಚ್ಚು ಸಮಸ್ಯೆಗೆ ಒಳಗಾಗಿವೆ . ಈ ನಾಲ್ಕು ಕ್ಷೇತ್ರಗಳಲ್ಲಿ ಮೂರರಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಹೆಚ್ಚಿದೆ ಎಂದು ವರದಿ ತಿಳಿಸಿದೆ.

 ಈ ಹಿನ್ನೆಲೆಯಲ್ಲಿ ಯುವಜನತೆಗೆ ಉದ್ಯೋಗಾವಕಾಶ ಸೃಷ್ಟಿಸಲು ಈ ಪ್ರದೇಶದ ಸರಕಾರಗಳು ಶಿಕ್ಷಣ ಮತ್ತು ತರಬೇತಿಯ ಜೊತೆಗೆ ಕ್ಷಿಪ್ರ ಮತ್ತು ವ್ಯಾಪಕ ಮತ್ತು ಉದ್ದೇಶಿತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News