ಜಾತ್ಯತೀತರನ್ನು 'ಗ್ಯಾಂಗ್' ಎಂದ ನ್ಯೂಸ್ ನೇಷನ್ : ಕಾರ್ಯಕ್ರಮ ಬಹಿಷ್ಕರಿಸಿದ ಯೋಗೇಂದ್ರ ಯಾದವ್

Update: 2020-08-18 16:31 GMT

ಹೊಸದಿಲ್ಲಿ, ಆ.18: ಹಿಂದಿ ಸುದ್ದಿ ವಾಹಿನಿ ‘ನ್ಯೂಸ್ ನೇಷನ್’ನ ಚರ್ಚಾ ಕಾರ್ಯಕ್ರಮ 'ದೇಶ್ ಕಿ ಬಹಸ್' ನಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದ ಖ್ಯಾತ ಚಿಂತಕ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಕಾರ್ಯಕ್ರಮದ ಬಗ್ಗೆ ಚಾನೆಲ್ ನ ಪ್ರಚಾರ ಟ್ವೀಟ್ ನಲ್ಲಿ ಬಳಸಿದ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. 

ಪ್ರಶಾಂತ್ ಭೂಷಣ್ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಬಗ್ಗೆ ನ್ಯೂಸ್ ನೇಷನ್ ಚಾನಲ್ ನ ಖ್ಯಾತ ನಿರೂಪಕ ದೀಪಕ್ ಚೌರಾಸಿಯಾ ಅವರು ಮಂಗಳವಾರ ರಾತ್ರಿ 9 ಗಂಟೆಗೆ ನಡೆಸಲಿದ್ದ ' ದೇಶ್ ಕಿ ಬಹಸ್ ' ಚರ್ಚಾ ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಅವರು ಭಾಗವಹಿಸಲು ಒಪ್ಪಿಕೊಂಡಿದ್ದರು. ಆದರೆ ಕಾರ್ಯಕ್ರಮದ ಕುರಿತು ಮಾಡಿದ್ದ ಟ್ವೀಟ್ ನಲ್ಲಿ ನ್ಯೂಸ್ ನೇಷನ್ #ಗ್ಯಾಂಗ್ ಎಂಬ ಹ್ಯಾಷ್ ಟ್ಯಾಗ್ ಬಳಸಿತ್ತು. ಗ್ಯಾಂಗ್ ಎಂಬ ಪದದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಯೋಗೇಂದ್ರ ಯಾದವ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. 

"ಇದೊಂದು ನಿಷ್ಪಕ್ಷ ಚರ್ಚಾ ಕಾರ್ಯಕ್ರಮ ಎಂದು ನನಗೆ ಹೇಳಿದ್ದಕ್ಕೆ ನಾನು ಇದರಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದೆ. ಆದರೆ ಕಾರ್ಯಕ್ರಮದ ಮೊದಲೇ ಚರ್ಚೆಯ ಮೊದಲೇ ಚರ್ಚೆಯ ಇನ್ನೊಂದು ಕಡೆಯವರನ್ನು ಗ್ಯಾಂಗ್ ಎಂದು ಬಣ್ಣಿಸಿದ್ದೀರಿ. ಹಾಗಾಗಿ ಇದರಲ್ಲಿ ನಾನು ಭಾಗವಹಿಸುವುದಿಲ್ಲ. ಅಷ್ಟಕ್ಕೂ ಗ್ಯಾಂಗ್ ಸ್ಟರ್ ಜೊತೆ ಮಾತನಾಡುವುದು ನಿಮ್ಮ ಚಾನಲ್ ಗೂ ಶೋಭೆ ತರುವುದಿಲ್ಲ. ಶುಭವಾಗಲಿ” ಎಂದು ಯಾದವ್ ಟ್ವೀಟ್ ಮಾಡಿದ್ದಾರೆ. 

ನ್ಯೂಸ್ ನೇಷನ್ ಹಾಗು ದೀಪಕ್ ಚೌರಾಸಿಯಾ ಬಿಜೆಪಿ ಹಾಗು ಪ್ರಧಾನಿ  ನರೇಂದ್ರ ಮೋದಿ  ಅವರ ಪರವಾಗಿ ಮಾತ್ರ ಸುದ್ದಿ ಮಾಡುತ್ತಾರೆ ಹಾಗು ಅವರ ಬಗ್ಗೆ ಯಾವುದೇ ಟೀಕೆಯನ್ನು ಸಹಿಸುವುದಿಲ್ಲ ಎಂದು ವ್ಯಾಪಕ ದೂರುಗಳು ನಿರಂತರ ಕೇಳಿ ಬರುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News